ಕೆ.ಆರ್.ನಗರ: ಸಾಲಿಗ್ರಾಮ ಪಟ್ಟಣದಲ್ಲಿ ಆ.10ರಂದು ಸಾಲಿಗ್ರಾಮ ಹಾಗೂ ಕೆ.ಆರ್.ನಗರ ತಾಲೂಕುಗಳ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಶುಕ್ರವಾರ ಆಹ್ವಾನಿಸಲಾಯಿತು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಸುತ್ತೂರು ಶಾಖಾಮಠದಲ್ಲಿ ಶ್ರೀಗಳನ್ನು ಕರ್ಪೂರವಳ್ಳಿ ಜಂಗಮ ಮಠಾಧೀಶ ಶ್ರೀ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಹ್ವಾನಪತ್ರಿಕೆ ನೀಡಲಾಯಿತು. ಬಸವ ಜಯಂತಿಯಂದು ಕರ್ಪೂರವಳ್ಳಿ ಜಂಗಮ ಮಠದಲ್ಲಿ ಸಾಧು ಸಂತರಿಗೆ ವಾಸ್ತವ್ಯ, ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಮಠಕ್ಕೆ ಭೇಟಿ ನೀಡಬೇಕೆಂದು ಸ್ವಾಮೀಜಿಯವರು ಸುತ್ತೂರು ಶ್ರೀಗಳನ್ನು ಕೋರಿದರು.
ಈ ವೇಳೆ ಕರ್ಪೂರವಳ್ಳಿ ಶ್ರೀಗಳನ್ನು ಸುತ್ತೂರು ಶ್ರೀಗಳು ಶಾಲು ಹೊದಿಸಿ ಫಲ ತಾಂಬೂಲ ನೀಡಿ ಗೌರವಿಸಿದರು.
ಮುಖಂಡರಾದ ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಕಾಂಗ್ರೆಸ್ ಮುಖಂಡ ತಂದ್ರೆ ದಿಲೀಪ್, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಲಾಲನಹಳ್ಳಿ ಕೆಂಪರಾಜು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕವಡ್ಡರಗುಡಿ ಸಿ.ಪಿ.ರಮೇಶ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಣ್ಣ ಲಿಂಗಪ್ಪ, ಎಲೆಮುದ್ದನಹಳ್ಳಿ ಲಿಂಗಪ್ಪ, ಪತ್ರಕರ್ತ ಕರ್ಪೂರವಳ್ಳಿ ಮಹದೇವ್, ಭೇರ್ಯ ಪ್ರಕಾಶ್ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇದ್ದರು.