ಜಿಲ್ಲೆ

ಸರ್ವೇ ಮಾದರಿಯಲ್ಲಿ ಜನರ ಆರೋಗ್ಯ ಮಾಹಿತಿ ಸಂಗ್ರಹ

ಚಿಕ್ಕಬಳ್ಳಾಪುರ : ಕರೊನಾ ಸೋಂಕಿನ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ ಮನೆಗೆ ತೆರಳಿ ಸರ್ವೇ ನಡೆಸಿದ ಮಾದರಿಯಲ್ಲಿ ಜನರ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಆಯಾ ಮತಗಟ್ಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ಅನರ್ಹರ ಕೈ ಬಿಡುವಿಕೆಯ ಜತೆಗೆ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಇದೀಗ ಅದೇ ಮಾದರಿಯಲ್ಲಿ ಅದೇ ಅಧಿಕಾರಿಗಳು ಕುಟುಂಬಗಳ ಆರೋಗ್ಯದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ವರದಿ ಆಧಾರದ ಮೇಲೆ ಕರೊನಾ ಲಕ್ಷಣಗಳು ಇರುವ ಪ್ರದೇಶಗಳು, ಶಂಕಿತರ ಮೇಲೆ ನಿಗಾ, ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಆರೋಗ್ಯ ಇಲಾಖೆ ಮೂಲಕ ಸೂಕ್ತ ಸಲಹೆ, ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಮನೆ ಮನೆಗೂ ಭೇಟಿ ನೀಡಿ, ಸ್ಕ್ರಿನಿಂಗ್ ನಡೆಸುತ್ತಿದ್ದಾರೆ. ಸ್ಥಳೀಯರು ವಿದೇಶ ಮತ್ತು ಅನ್ಯ ರಾಜ್ಯಗಳ ಪ್ರವಾಸ ಕೈಗೊಂಡಿರುವ, ಅನಾರೋಗ್ಯ ಸಮಸ್ಯೆಯ ವಿವರ, ಕರೊನಾ ಸೋಂಕಿತರು ಇಲ್ಲದಿರುವುದನ್ನು ದೃಢಪಡಿಸಿಕೊಳ್ಳುವಿಕೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜತೆಗೆ ಸ್ಥಳೀಯವಾಗಿ ಮತದಾರರ ಬಗ್ಗೆ ಸಮರ್ಪಕವಾಗಿ ಮಾಹಿತಿ ಹೊಂದಿರುವ ಮತಗಟ್ಟೆ ಅಧಿಕಾರಿಗಳ ಮೂಲಕ ಖಚಿತ ವರದಿ ಪಡೆದುಕೊಳ್ಳಲು ಚಿಂತಿಸಲಾಗಿದೆ. ಇದಕ್ಕೆ ಸರ್ಕಾರದ ಆದೇಶದಂತೆ ಆಯಾ ತಹಸೀಲ್ದಾರ್ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ಸಭೆ ನಡೆಸಿ, ಸರ್ವೆ ಬಗ್ಗೆ ತರಬೇತಿ ನೀಡಲಾಗಿದೆ.

ಸರ್ವೇ ಮುಖ್ಯ ಉದ್ದೇಶ : ಕೆಮ್ಮು, ನೆಗಡಿ, ಜ್ವರ, ಉಸಿರಾಟ ತೀವ್ರ ಸಮಸ್ಯೆಯು ಕರೊನಾ ಸೋಂಕಿನ ಪ್ರಮುಖ ಲಕ್ಷಣಗಳು. ಇದರ ನಡುವೆ ಹವಾಮಾನ ವೈಪರೀತ್ಯ ಸೇರಿ ನಾನಾ ಕಾರಣಗಳಿಂದ ಸಾಮಾನ್ಯ ಜ್ವರ, ಕೆಮ್ಮು, ನೆಗಡಿ ಬಂದರೂ ಅನೇಕರು ಸೋಂಕಿನ ಆತಂಕಕ್ಕೊಳಗಾಗುತ್ತಿದ್ದಾರೆ. ಪ್ರಾರಂಭದಲ್ಲಿ ಅನೇಕರು ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗೆ ಕರೊನಾ ಲಕ್ಷಣಗಳು ಇವೆ ಎಂದು ಹೇಳಿಕೊಂಡು ಮುಗಿಬಿದ್ದಿದ್ದರು. ವೈದ್ಯರು ತಪಾಸಣೆ ಮಾಡಿ, ಸೋಂಕು ಇಲ್ಲದಿರುವುದನ್ನು ದೃಢಪಡಿಸಿದ್ದರೂ ಗೊಂದಲಕ್ಕೀಡಾಗಿದ್ದರು. ಮತ್ತೆ ಹಲವರು ಸೋಂಕಿತರೊಂದಿಗೆ ನೇರ ಸಂಪರ್ಕದಲ್ಲಿದ್ದರೂ ಟ್ರಾವೆಲ್ ಹಿಸ್ಟರಿಯ ಮಾಹಿತಿ ಹಂಚಿಕೊಂಡಿರಲಿಲ್ಲ. ಕೊನೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸರ್ವೇ ಮೂಲಕ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ನಲ್ಲಿರಿಸಿದೆ. ಇದರ ನಡುವೆ ಆರೋಗ್ಯ ಸಮಸ್ಯೆಯಿರುವ ರೋಗಿಯನ್ನು ಮುಂಚಿತವಾಗಿ ಗುರುತಿಸಿ, ಕರೊನಾ ಸೋಂಕಿನಿಂದ ಉಂಟಾಗಬಹುದಾದ ವೈದ್ಯಕೀಯ ಸಂಕೀರ್ಣತೆಯಿಂದ ರಕ್ಷಿಸುವುದೇ ಸರ್ವೆ ಕಾರ್ಯದ ಮುಖ್ಯ ಉದ್ದೇಶವಾಗಿದೆ.

ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್ ಹೆಲ್ತ್ ವಾಚ್ ಇಲ್ಲವೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿರುವ ಗಣಕಯಂತ್ರ ಅಥವಾ ಲ್ಯಾಪ್ ಟಾಪ್ ಮೂಲಕ ಆನ್‌ಲೈನ್ ನಲ್ಲಿ ಅಪ್‌ಲೋಡ್ ಮಾಡಲು ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ವೇ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಗೈರಾಗುವಂತಿಲ್ಲ. ಒಂದು ವೇಳೆ ಮತಗಟ್ಟೆ ಅಧಿಕಾರಿಗಳ ಕೊರತೆ ಕಂಡು ಬಂದಲ್ಲಿ ಹೊಸದಾಗಿ ಶಿಕ್ಷಕರು ಮತ್ತು ವಿವಿಧ ಇಲಾಖೆ ಅಧಿಕಾರಿಗಳನ್ನು ನೇಮಿಸಲು ಸೂಚಿಸಿದ್ದು ಸಮಗ್ರ ವರದಿಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ.

ಹಿರಿಯರ ಮೇಲೆ ಹೆಚ್ಚಿನ ನಿಗಾ : ಪ್ರತಿ ಮತಗಟ್ಟೆ ಅಧಿಕಾರಿಯು ಪ್ರತಿ ಮನೆಯ ಮುಖ್ಯಸ್ಥನ ದೂರವಾಣಿ ಸಂಖ್ಯೆ, ವಯಸ್ಸು, ಮನೆಯ ಸಂಖ್ಯೆ, ಕುಟುಂಬದ ಸದಸ್ಯರ ವಯಸ್ಸು; ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಕ್ಯಾನ್ಸರ್, ಲಿವರ್ ಸಮಸ್ಯೆ ಮತ್ತು ಇತರ ಗಂಭೀರ ಕಾಯಿಲೆಯ ಮಾಹಿತಿ, ಗರ್ಭಿಣಿಯರು ಮತ್ತು ತಾಯಂದಿರು, 6 ತಿಂಗಳೊಳಗಿನ ಮಕ್ಕಳು...ಹೀಗೆ ಎಲ್ಲ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.