ಯಳಂದೂರು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ. ಎಸ್.ನರೇಂದ್ರಕುಮಾರ್ ಅವರನ್ನು ಎಂ. ಶೈಲಕುಮಾರ್, ಯರಿಯೂರು ನಾಗೇಂದ್ರ ಮತ್ತಿತರರು ಆಹ್ವಾನಿಸಿದರು. 
ಜಿಲ್ಲೆ

ಸರ್ವಾಧ್ಯಕ್ಷರಾಗಿ ಡಾ.ನರೇಂದ್ರಕುಮಾರ್ ಆಯ್ಕೆ

ಯಳಂದೂರು: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 28ರಂದು ಆಯೋಜಿಸಲಾಗಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದ ಡಾ. ಎಸ್.ನರೇಂದ್ರಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಸಾಪ ಕಾರ್ಯಕಾರಣಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಶೈಲಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಎನ್. ನಾಗೇಂದ್ರ ಯರಿಯೂರು ನೇತೃತ್ವದಲ್ಲಿ ಡಾ.ಎಸ್. ನರೇಂದ್ರಕುಮಾರ್ ಅವರಿಗೆ ಮೈಸೂರಿನ ನಿವಾಸದಲ್ಲಿ ಆಹ್ವಾನ ನೀಡಲಾಯಿತು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಫೆ. 28ರಂದು ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಬೆಳಗ್ಗೆ ಧ್ವಜಾರೋಹಣ, ಮೆರವಣಿಗೆ, ಸಮ್ಮೇಳನ ಉದ್ಘಾಟನೆ, ವಿಚಾರಗೋಷ್ಠಿ, ಕವಿಗೋಷ್ಠಿ, ಸಮಾರೋಪ ಸಮಾರಂಭ ಹಾಗೂ ಕಲಾವಿದರು ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಎಂ. ಶೈಲಕುಮಾರ್ ಮಾಹಿತಿ ನೀಡಿದ್ದಾರೆ.

ಪರಿಚಯ: ಎಸ್.ನರೇಂದ್ರಕುಮಾರ್ ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದ ಶ್ರೀನಿವಾಸಮೂರ್ತಿ ಹಾಗೂ ಮಾಲತಿ ದಂಪತಿ ಪುತ್ರ. ಮೈಸೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಹಾಗೂ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಸಮಾಜ ಮತ್ತು ಅಂಬೇಡ್ಕರ್, ನಿಜದ ನೆಲೆ, ಬೋಧಿ ನೆಲದ ಮಾತು, ದಸಂಸ ಹೋರಾಟ ಪಯಣ, ಮೂರು ನದಿಯ ಬೊಗಸೆ ನೀರು, ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್, ಸಮಾನತೆಯ ಕನಸುಗಾರ ಅಂಬೇಡ್ಕರ್, ಬಿಡುಗಡೆಯ ಬೆಳಕು, ಧಾರ್ಮಿಕ ವಿಮೋಚಕರಾಗಿ ಡಾ. ಬಿ.ಆರ್.ಅಂಬೇಡ್ಕರ್ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.

ಅಲ್ಲದೆ ಅಂಬೇಡ್ಕರ್ ಅಂತರಂಗ, ಅಂಬೇಡ್ಕರ್ ಸೂಕ್ತಿಗಳು, ನೋವು ಹೆತ್ತ ಪ್ರೀತಿ, ಅಭಿಮುಖಿ, ಅರಿವಿನಕುರುಹು, ಮರಳಿಮನೆಗೆ, ಬತ್ತಲಾರದ ಬದುಕು ಸೇರಿದಂತೆ ಹಲವು ಸಂಪಾದಿತ ಕೃತಿಗಳು, ಮಹಾಚೇತನ ಎಂಬ ಜೀವನ ಚರಿತ್ರೆ, ನೀಲಗಾರ ನಿನಾದ ಎಂಬ ಆತ್ಮಕಥೆ ನಿರೂಪಣೆ, ಕಿರು ರೂಪಕಗಳನ್ನು ಬರೆದಿದ್ದು, ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.