ತೀರ್ಥಹಳ್ಳಿ: ಅರಣ್ಯ ಇಲಾಖೆ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಬಿಟ್ಟು ಜನಜೀವನಕ್ಕೆ ಅಡ್ಡಿಯಾಗದಂತೆ ಕೆಲಸ ಮಾಡದಿದ್ದಲ್ಲಿ ನಿಮ್ಮ ವಿರುದ್ಧ ಜನರ ಜತೆ ನಾನೇ ಬೀದಿಗಿಳಿದು ಹೊರಾಟ ಮಾಡಬೇಕಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದರು.
ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಪಂ ತ್ರೖೆಮಾಸಿಕ ಸಭೆಯಲ್ಲಿ, ಮಂಡಗದ್ದೆ ವಲಯದ ಓರ್ವ ಗಾರ್ಡ್ ಪರಿಶಿಷ್ಟ ವರ್ಗದ ವ್ಯಕ್ತಿಯಿಂದ 600 ರೂ. ಲಂಚ ತೆಗೆದುಕೊಂಡಿರುವ ವಿಷಯ ತಿಳಿದ ಶಾಸಕರು ಕೆಂಡಾಮಂಡಲರಾದರು. ಈ ವ್ಯಕ್ತಿ ಸರ್ಕಾರಿ ನೌಕರಿ ಮಾಡುವುದಕ್ಕಿಂತ ಭಿಕ್ಷೆ ಬೇಡುವುದು ಸೂಕ್ತ. ಹಣವನ್ನು ಬುಧವಾರವೇ ವ್ಯಕ್ತಿಗೆ ಹಿಂದಿರುಗಿಸಿ ನನಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.
ದಿನಬೆಳಗಾದರೆ ಅರಣ್ಯ ಇಲಾಖೆ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ಶಾಸಕನಾಗಿ ಜನರ ವಿರೋಧ ಕಟ್ಟಿಕೊಳ್ಳಬೇಕಿದೆ. ಶುಂಠಿ ಬೆಳೆದ ರೈತನನ್ನು ಜೈಲಿಗಟ್ಟುವ ನಿಮಗೆ ಮಾನವೀಯತೆ ಇಲ್ಲ. ಶತ್ರುತ್ವ ನಿರ್ವಣವಾದರೆ ಕೆಲಸ ಮಾಡುವುದು ಕಷ್ಟವಾದೀತು. ಬೋಗಸ್ ಪರಿಸರವಾದಿಗಳಿಂದಲೂ ಸಮಸ್ಯೆ ಉದ್ಭವವಾಗುತ್ತಿದೆ. ಅರಣ್ಯ ರಕ್ಷಣೆಗೆ ವಿರೋಧವಿಲ್ಲಾ. ಆದರೆ ಇಲ್ಲದ ಕಾನೂನು ಜಾರಿಗೆ ಮುಂದಾದರೆ ಸಹಿಸುವುದಿಲ್ಲ ಎಂದರು.
ಅರಣ್ಯ ಇಲಾಖೆಯಿಂದ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳು ಪಾರದರ್ಶಕವಾಗಿಲ್ಲ. ಇಲಾಖೆಯಲ್ಲಿ ಏನು ನಡೆಯುತ್ತದೆ ಎಂಬುದೇ ತಿಳಿಯುತ್ತಿಲ್ಲ. ಹಾಗಾಗಿ ಮುಂದೆ ಈ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಮುಖ್ಯವಾಗಿ ನೀವು ಬಳಸುವ ಭಾಷೆ ಮೇಲೆ ಹಿಡಿತ ಇರಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆಯ ಕಡೆಗಣನೆ: ಮಾತೃ ಇಲಾಖೆ ಕಂದಾಯ ಇಲಾಖೆಯನ್ನೇ ಕಡೆಗಣಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಶವ ಸಂಸ್ಕಾರ ಮತ್ತು ತ್ಯಾಜ್ಯ ವಿಲೇವಾರಿಗೂ ಅನುಮತಿ ನೀಡುತ್ತಿಲ್ಲ ಎಂದು ತಹಸೀಲ್ದಾರ್ ಡಾ. ಶ್ರೀಪಾದ ಅಸಮಾಧಾನ ವ್ಯಕ್ತಪಡಿಸಿದರು. ಮೂರು ವರ್ಷಗಳ ಹಿಂದೆ ಕಳಿಸಿರುವ ಸ್ಮಶಾನದ ಪ್ರಸ್ತಾವನೆಗೆ ಈವರೆಗೂ ಅನುಮತಿ ನೀಡಿಲ್ಲ. ಅರಣ್ಯೇತರ ಭೂಮಿಯನ್ನು ಸೇರಿಸಿಕೊಳ್ಳುವ ಮುನ್ನ ಕಂದಾಯ ಇಲಾಖೆ ಅನುಮತಿ ಪಡೆಯುತ್ತಿಲ್ಲ. ಹೆಗಲತ್ತಿಯಲ್ಲಿ ಉಂಟಾದ ಭೂಕುಸಿತ ಪ್ರಕರಣದ ಸಂತ್ರಸ್ತರಿಗೆ ನೆರವು ನೀಡುವ ವಿಚಾರದಲ್ಲಿ ಅರಣ್ಯ ಇಲಾಖೆಯಿಂದ ಈವರೆಗೂ ಪ್ರಸ್ತಾವನೆ ಬಂದಿಲ್ಲ. ಹೀಗಾಗಿ ಸಿಎಂ ಖುದ್ದಾಗಿ ಬಂದು ಸ್ಥಳ ಪರಿಶೀಲಿಸಿದ್ದರೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕುತ್ತಿಲ್ಲಾ ಎಂದು ಸಭೆ ಗಮನಕ್ಕೆ ತಂದರು.
ಸದನದಲ್ಲಿ ಕೆಎಫ್ಡಿ ಚರ್ಚೆ: ತಾಲೂಕಿನಲ್ಲಿ ಈ ವರ್ಷ 141 ಮಂದಿಗೆ ಕೆಎಫ್ಡಿ ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ತಾಲೂಕಿನಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಮುಂದೆ ವೈರಸ್ ವ್ಯಾಪಿಸುವ ಆತಂಕವಿದ್ದು ಜನರು ಎಚ್ಚರವಹಿಸುವುದು ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಹೇಳಿದರು. ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಮಾತನಾಡಿ, ನಾಲ್ಕಾರು ದಶಕಗಳಿಂದ ಜಿಲ್ಲೆಯ ಜನರನ್ನು ಕಾಡುತ್ತಿರುವ ಮಂಗನ ಕಾಯಿಲೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೊಡ್ಡ ಮಟ್ಟದ ಪ್ರಯತ್ನ ಆಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ ಎಂದರು.
ತಾಪಂ ಉಪಾಧ್ಯಕ್ಷೆ ಯಶೋದಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಇಒ ಆಶಾಲತಾ, ಪ್ರಭಾರ ಬಿಇಒ ಮಂಜುನಾಥ್ ಇತರರಿದ್ದರು.