ಜಿಲ್ಲೆ

ಸರ್ವಾಂಗೀಣ ಪ್ರಗತಿಗೆ ಒಳ ಮೀಸಲಾತಿ ಅಗತ್ಯ

ಚಿಕ್ಕಬಳ್ಳಾಪುರ: ದಲಿತ ಸಮುದಾಯದ ಸರ್ವಾಂಗೀಣ ಪ್ರಗತಿಗೆ ಒಳ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಬೇಕಾಗಿರುವುದು ಅನಿವಾರ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಕದಸಂಸ ಶನಿವಾರ ಆಯೋಜಿಸಿದ್ದ ಒಳ ಮೀಸಲಾತಿಯ ಅಸ್ತ್ರ ದಲಿತರ ಮುಂದಿನ ಸವಾಲುಗಳು ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಶೋಷಿತ ವರ್ಗದ ಜನರು ಮೇಲ್ವರ್ಗದವರಿಗೆ ಸರಿ ಸಮಾನವಾಗಿ ಉತ್ತಮ ಜೀವನ ನಡೆಸಲು ಸಂವಿಧಾನವು ಮೀಸಲಾತಿ ಸೌಲಭ್ಯ ಕಲ್ಪಿಸಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಅಸ್ಪಶ್ಯತೆ, ಅಸಮಾನತೆ, ಜಾತಿನಿಂದನೆಯ ಪಿಡುಗು ದೂರವಾಗಿಲ್ಲ. ಈಗಲೂ ದಲಿತರನ್ನು ಕೀಳಾಗಿ ಕಾಣುವಂತಹ ಪ್ರಕರಣಗಳು ವ್ಯಾಪಕವಾಗಿ ಬೆಳಕಿಗೆ ಬರುತ್ತಿವೆ. ಇದಕ್ಕೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವುದೇ ಪ್ರಮುಖ ಕಾರಣ ಎಂದರು.

ದಲಿತ ವರ್ಗಕ್ಕೆ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ. ಆದರೆ, ಇದಕ್ಕೆ ಜಾಣ ನಿದ್ದೆಯಲ್ಲಿರುವ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಇದರ ನಡುವೆ ಇತರೆ ವರ್ಗಗಳನ್ನು ಮೀಸಲಾತಿ ಜಾತಿ ಪಟ್ಟಿಗೆ ಸೇರಿಸಿ, ಶೋಷಿತರನ್ನು ಸವಲತ್ತು ವಂಚಿತರನ್ನಾಗಿಸಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ದಲಿತರಿಗೆ ಒಳ ಮೀಸಲಾತಿ ಕಲ್ಪಿಸುವುದರ ಬಗ್ಗೆ ಸದಾಶಿವ ಆಯೋಗವು ಸರ್ಕಾರಕ್ಕೆ ವರದಿ ನೀಡಿದ್ದು ಇದನ್ನು ಅನುಷ್ಠಾನಗೊಳಿಸಲು ಮೀನಾ ಮೇಷ ಎಣಿಸಲಾಗುತ್ತಿದೆ. ಇದಕ್ಕೆ ಕಾಣದ ಪ್ರಭಾವಿ ಕೈವಾಡ ಪ್ರಮುಖ ಕಾರಣ ಎಂದು ಕದಸಂಸ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಆರೋಪಿಸಿದರು.

ಜಿಲ್ಲಾ ಸಂಚಾಲಕ ವೈ.ಎ.ಕಡ್ಡೀಲು ವೆಂಕಟರಮಣಪ್ಪ ಮಾತನಾಡಿ, ಮೀಸಲಾತಿ ಬದಲಾವಣೆ, ರದ್ದುಗೊಳಿಸುವುದರ ಬಗ್ಗೆ ಚರ್ಚೆಗಳಾಗುತ್ತಿವೆ. ಇದಕ್ಕೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದಲ್ಲಿ ಮತ್ತೆ ಶೋಷಿತ ವರ್ಗ ಕಠಿಣ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದರು. ವಕೀಲ ಎಸ್.ಎಂ.ಮುರಳಿ ಮೋಹನ್, ಕದಸಂಸ ಸಂಘಟನಾ ಸಂಚಾಲಕ ವಿಜಯನರಸಿಂಹ, ಜಿಲ್ಲಾ ಸಂಚಾಲಕರಾದ ಎಸ್.ಡಿ.ಮುನಿರಾಜು, ಸಂಘಟನಾ ಸಂಚಾಲಕ ತಿಪ್ಪೇನಹಳ್ಳಿ ನಾರಾಯಣ, ವಿ.ಅಮರ್ ಮತ್ತಿತರರು ಇದ್ದರು.