ಗಜೇಂದ್ರಗಡ: 2020-21ನೇ ಸಾಲಿನ ಬಜೆಟ್ ತಯಾರಿ ಕುರಿತು ರ್ಚಚಿಸಲು ಪುರಸಭೆ ಸಭಾಭವನದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಪಟ್ಟಣದ ಸರ್ವಾಂರ್ಗೀಣ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ವಾರ್ಡ್ಗಳಿಗೂ ಆದ್ಯತೆ ನೀಡಲಾಗುತ್ತದೆ. ನಾಗರಿಕರು ಸಕಾಲಕ್ಕೆ ತೆರಿಗೆ ಪಾವತಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕಿದೆ ಎಂದರು.
ಸಮಸ್ಯೆ ಕುರಿತು ಮಾತನಾಡಿದ ಸದಸ್ಯರು, ಪಟ್ಟಣದ ಜನತೆ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಬೇಸಿಗೆಯಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಹೀಗಾಗಿ ಪೈಪ್ಲೈನ್ ರಿಪೇರಿ, ಕೊಳವೆಬಾವಿ ಕೊರೆಯಿಸಿ ಕುಡಿಯುವ ನೀರಿನ ಬವಣೆ ತಗ್ಗಿಸಲು ಕ್ರಮ ಕೈಗೊಳ್ಳಬೇಕು. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಸಿದ್ಧಪಡಿಸಬೇಕು ಎಂದರು.
ಪುರಸಭೆ ಸದಸ್ಯ ರಾಜು ಸಾಂಗ್ಲಿಕರ ಮಾತನಾಡಿ, ಸಾರ್ವಜನಿಕರು ಮತ್ತು ಬೀದಿ ಬದಿ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ನಿರ್ವಿುಸಬೇಕು ಅಲ್ಲದೆ, ಸ್ಥಳೀಯ ರಾಜವಾಡೆಯ ಬಳಿ ಹೈಮಾಸ್ಟ್ ದೀಪ ಅಳವಡಿಸಬೇಕು. ಪತ್ರಿಕಾ ಭವನ ಕಟ್ಟಡ ನಿರ್ವಣವಾಗುವವರೆಗೂ ಖಾಲಿ ಇರುವ ಪುರಸಭೆ ಮಳಿಗೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದರು.
6ನೇ ವಾರ್ಡ್ನಲ್ಲಿ ಸುಮಾರು 20 ವರ್ಷಗಳಿಂದ ಕೈಗೊಂಡ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯನ್ನು ಸಿ.ಸಿ.ರಸ್ತೆಯನ್ನಾಗಿ ಮಾಡಬೇಕು. ಕಾಲಕಾಲೇಶ್ವರ ವೃತ್ತದಲ್ಲಿ ಸಿಸಿ ಕ್ಯಾಮರಾ ಅವಳಡಿಸಬೇಕು. ಬಿಡಾಡಿ ದನಗಳನ್ನು ನಿಯಂತ್ರಿಸಿ, ಕಸ ವಿಲೇವಾರಿ ವಾಹನಗಳ ಸಂಖ್ಯೆ ಹೆಚ್ಚಿಸಿ ಪಟ್ಟಣದ ಸ್ವಚ್ಛತೆಗೆ ಮುಂದಾಗಬೇಕು. ಅಲ್ಲದೆ, ಸ್ಥಳೀಯ ಉದ್ಯಾನ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದರು.
ಕನಕಪ್ಪ ಅರಳಿಗಿಡದ, ಶರಣಪ್ಪ ಉಪ್ಪಿನಬೆಟಗೇರಿ, ಸುಭಾಸ ಮ್ಯಾಗೇರಿ, ಯು.ಆರ್. ಚನ್ನಮ್ಮನವರ, ಮುದಿಯಪ್ಪ ಮುಧೋಳ, ರೂಪ್ಲೇಶ ರಾಠೋಡ, ರಾಜು ಸಾಂಗ್ಲೀಕರ, ವೀರಪ್ಪ ಪಟ್ಟಣಶಟ್ಟಿ, ಯಮನೂರ ತಿರಕೋಜಿ, ಲೀಲಾ ಸವಣೂರ, ವಿಜಯಾ ಮಳಗಿ, ಲಕ್ಷ್ಮೀ ಮುಧೋಳ, ಚೋಳಿನ, ಕೌಸರಬಾನು ಹುನಗುಂದ, ಸುಜಾತಾಬಾಯಿ ಶಿಂಗ್ರಿ ಹಾಗೂ ಬಿ.ಎಂ. ಸಜ್ಜನ, ಚಂದ್ರು ಚಳಗೇರಿ, ಗುಲಾಂ ಹುನಗುಂದ ಇತರರು ಇದ್ದರು.
ಪ್ರಚಾರದ ಕೊರತೆ
ಆಯವ್ಯಯ ಸಿದ್ಧತೆ ಕುರಿತು ರ್ಚಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಹೆಚ್ಚಾಗಿ ಪಾಲ್ಗೊಂಡಿರಲಿಲ್ಲ. ಪ್ರಚಾರದ ಕೊರತೆಯೇ ಅದಕ್ಕೆ ಪ್ರಮುಖ ಕಾರಣ ಎನ್ನುವ ಆರೋಪಗಳು ಕೇಳಿ ಬಂದವು. ಪುರಸಭೆಯ ಕೆಲ ಸದಸ್ಯರೇ ಹತ್ತಾರು ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಸಾರ್ವಜನಿಕರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರೆ ಪಟ್ಟಣದ ಅಭಿವೃದ್ಧಿಗೆ ಮತ್ತಷ್ಟು ಸಲಹೆ ಸೂಚನೆಗಳು ಸಿಗುತ್ತಿದ್ದವು.