ಜಿಲ್ಲೆ

ಸರ್ವರೋಗಕ್ಕೂ ಆಯುರ್ವೇದದಲ್ಲಿದೆ ಮದ್ದು

ಮೈಸೂರು: ಸರ್ವರೋಗಗಳಿಗೂ ಪ್ರಾಕೃತಿಕ ಮತ್ತು ಆಯುರ್ವೇದಿಕ ವೈದ್ಯಕೀಯ ಪದ್ಧತಿಯಲ್ಲಿ ಮದ್ದು ಇದೆ. ಜತೆಗೆ ಸಂಪೂರ್ಣವಾಗಿ ಗುಣಪಡಿಸುವ ಸಾಮರ್ಥ್ಯವೂ ಇದೆ ಎಂದು ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್‌ವಿವೈಎಎಸ್‌ಎ) ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಆರ್.ರಾಮಕೃಷ್ಣ ಹೇಳಿದರು.


ನಗರದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಪ್ರಕೃತಿ ಚಿಕಿತ್ಸೆ, ಯೋಗ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಆಧುನಿಕ ವೈದ್ಯಕೀಯ ಪದ್ಧತಿಯಾದ ಅಲೋಪತಿಯಲ್ಲಿ ಬಹಳಷ್ಟು ರೋಗಗಳಿಗೆ ಪರಿಹಾರವೇ ಇಲ್ಲ. ಇವುಗಳನ್ನು ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ. ಮಧುಮೇಹ ಸಂಪೂರ್ಣವಾಗಿ ವಾಸಿ ಮಾಡಲು ಆಗಲ್ಲ. ಅದನ್ನು ನಿರ್ವಹಣೆ ಮಾಡಿಕೊಂಡು ಸಾಗಬೇಕು. ಕ್ಯಾನ್ಸರ್, ಬಿಪಿ, ನಿದ್ರಾಹೀನತೆ, ಸೋರಿಯಾಸಿಸ್, ಹೃದ್ರೋಗ ಸೇರಿದಂತೆ ಇನ್ನಿತರ ರೋಗಳಿಗೆ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಪರಿಹಾರವಿಲ್ಲ. ಪ್ರತಿಯೊಂದು ಶಾರೀರಿಕ, ಮಾನಸಿಕ ಕಾಯಿಲೆಗಳಿಗೆ ಪ್ರಕೃತಿ ಚಿಕಿತ್ಸೆಯಲ್ಲಿ ಪರಿಹಾರ ಇದೆ ಎಂದರು.


ಭಾರತೀಯ ಪ್ರಕೃತಿ ಚಿಕಿತ್ಸೆಯು ಪರ್ಯಾಯ ಔಷಧ ಎಂದು ವಿಶ್ವ ಆರೋಗ್ಯ ಸಂಸ್ಥೆ ಮನ್ನಣೆ ನೀಡಿದೆ. ಪ್ರತಿಯೊಂದು ರೋಗಗಳನ್ನೂ ವಾಸಿ ಮಾಡಬಹುದಾಗಿದೆ. ಸಕ್ಕರೆ ಕಾಯಿಲೆಯನ್ನು ಪೂರ್ಣಪ್ರಮಾಣದಲ್ಲಿ ಗುಣಪಡಿಸಿದ ನಿದರ್ಶನಗಳಿವೆ. ಸ್ತನ ಕ್ಯಾನ್ಸರ್ ರೋಗಕ್ಕೆ ಯೋಗ, ನೈಸರ್ಗಿಕ ವೈದ್ಯಕೀಯ ಪದ್ಧತಿಯೇ ಸೂಕ್ತ ಔಷಧವಾಗಿದೆ ಎಂದರು.


ಆಹಾರ, ವಿಹಾರ, ವಿಚಾರ, ಆಚಾರ, ವ್ಯವಹಾರ ಮತ್ತು ಅಧ್ಯಾತ್ಮ ಎಂಬ ಆರು ಸೂತ್ರಗಳೇ ಪ್ರಕೃತಿ ಚಿಕಿತ್ಸಾ ಪದ್ಧತಿ ಬುನಾದಿಯಾಗಿದೆ. ರೋಗಿಯಲ್ಲಿ ಆತ್ಮವಿಶ್ವಾಸ ತುಂಬಿ, ರೋಗ ಪತ್ತೆ ಮಾಡಿ ನೈಸರ್ಗಿಕ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಅಲೋಪತಿ ಪದ್ಧತಿಯಲ್ಲಿ ಅಗತ್ಯಕ್ಕಿಂತ ಅನಗತ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಪ್ರಯೋಗ ಮತ್ತು ದೋಷ ವಿಧಾನವನ್ನು ರೋಗಿಗಳ ಮೇಲೆ ಜಾರಿ ಮಾಡಲಾಗುತ್ತದೆ. ಬಳಿಕ ಸಿಟಿ ಸ್ಕಾೃನ್, ಅಲ್ಟ್ರಾ ಸ್ಕಾೃನ್, ರಕ್ತ ಪರೀಕ್ಷೆಯಂತಹ ವ್ಯರ್ಥ ಟೆಸ್ಟ್‌ಗಳನ್ನು ಮಾಡಿಸಲಾಗುತ್ತದೆ. ಆದರೆ, ಪ್ರಕೃತಿ ಚಿಕಿತ್ಸೆಯಲ್ಲಿ ಇದಿಲ್ಲ ಎಂದು ಹೇಳಿದರು.


ಆಧುನಿಕ ವೈದ್ಯಕೀಯ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿದೆ. ಅಲೋಪತಿ ವೈದ್ಯರು ಕಿಕ್‌ಬ್ಯಾಕ್ ಪಡೆದುಕೊಳ್ಳುತ್ತಾರೆ. ಪ್ರತಿ ರೋಗಿಯ ಸಿಟಿಸ್ಕಾೃನ್, ರಕ್ತ ಪರೀಕ್ಷೆ ಸೇರಿದಂತೆ ಇನ್ನಿತರ ಟೆಸ್ಟ್‌ಗಳಿಗೆ ಇಂತಿಷ್ಟು ಹಣವನ್ನು ಡಯಾಗ್ನೋಸ್ಟಿಕ್ ಕೇಂದ್ರಗಳು ವೈದ್ಯರಿಗೆ ಕೊಡುತ್ತಿವೆ. ಇದು ವೈದ್ಯಕೀಯ ವೃತ್ತಿ ಅಗೌರವ ತರುವ ಕೆಲಸ ಎಂದು ಕಿಡಿಕಾರಿದರು.


ಆಧುನಿಕ ವೈದ್ಯಕೀಯ ಪದ್ಧತಿಯಿಂದ ಗುಣವಾಗದ ರೋಗಿಗಳು ಪ್ರಕೃತಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಬರುತ್ತಿದ್ದಾರೆ. ಚಿಕಿತ್ಸೆ, ಔಷಧ, ಟೆಸ್ಟ್‌ಗಳಿಂದ ಹಣ ಖಾಲಿ ಮಾಡಿಕೊಂಡ ರೋಗಿಗಳಲ್ಲಿ ನಕಾರಾತ್ಮಕ ಭಾವ ಮೂಡಿರುತ್ತದೆ. ಈ ರೀತಿ ನಿರಾಶೆಗೊಂಡ ರೋಗಿಗಗಳಿಗೆ ಪ್ರಕೃತಿ ಚಿಕಿತ್ಸೆ ಹೊಸ ಆಶಾಕಿರಣವಾಗಿದೆ ಎಂದರು.


ಶಿರಸಿಯ ನಿಸರ್ಗ ಮನೆಯ ಸಂಸ್ಥಾಪಕ ಡಾ.ವೆಂಕಟರಮಣ ಹೆಗಡೆ, ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಕಾಲೇಜಿನ ವೈದ್ಯರಾದ ಡಾ.ಬಿ.ಸಿ.ನಟರಾಜ, ಡಾ.ಹರಿಗಣೇಶ್ ಇನ್ನಿತರರಿದ್ದರು.