ತುಮಕೂರು : ಭಾರತೀಯ ಸಂವಿಧಾನ ಸರ್ವರಿಗೂ ನ್ಯಾಯ ಪಡೆಯುವ ಹಕ್ಕು ಕಲ್ಪಿಸಿದ್ದು, ತಾರತಮ್ಯಕ್ಕೆ ಒಳಗಾಗದೆ ನ್ಯಾಯ ಒದಗಿಸಲು ಕಾನೂನಿನ ಅರಿವು ಮತ್ತು ನೆರವಿನ ಅಗತ್ಯವಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಗರದ ಗಾಜಿನ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನ ಪ್ರಜೆಗಳಿಗೆ ಸಾಮಾಜಿ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿದೆ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಹಾಗೂ ಉಪಾಸನೆಯ ಸ್ವಾತಂತ್ರ್ಯ ನೀಡಿದೆ. ಸರ್ವರಿಗೂ ಸಮಾನ ಅವಕಾಶ, ಸ್ಥಾನಮಾನ ಕಲ್ಪಿಸಿದೆ. ವ್ಯಕ್ತಿ ಗೌರವ ಮತ್ತು ಸಹೋದರತೆ ಬೆಳೆಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ತಲೆ ಎತ್ತಿ ನಡೆಯುವ ಅವಕಾಶ ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ನ್ಯಾಯದಾನ ಪ್ರತಿಯೊಬ್ಬರಿಗೂ ತಲುಪಲು ಹಳ್ಳಿ-ಹಳ್ಳಿಯಲ್ಲಿಯೂ ಕಾನೂನು ಅರಿವು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ನ್ಯಾಯಾಂಗ ದೇಶದ ಒಳಗಡೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿರುವ ಜತೆಜತೆಗೆ ಸರ್ವರಿಗೂ ನ್ಯಾಯದಾನ ದೊರಕಿಸಲು ಕಾನೂನು ಅರಿವು ಮೂಡಿಸುತ್ತಿದೆ, ಸರ್ವರಿಗೂ ನ್ಯಾಯ ದೊರಕಬೇಕು ಎಂಬ ನಿಟ್ಟಿನಲ್ಲಿ ಪ್ರಕರಣಗಳ ಇತ್ಯರ್ಥಕ್ಕಾಗಿ ಲೋಕ ಅದಾಲತ್ ನಡೆಸಲಾಗುತ್ತಿದೆ ಎಂದರು.
ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯ ನಂತರ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕು, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಜೀವಂತವಾಗಿರುವ ನ್ಯಾಯಾಂಗ ಮತ್ತು ಮಾಧ್ಯಮಗಳು ಪೂರಕವಾಗಿ ಕಾರ್ಯನಿರ್ವಹಿಸಿದರೆ ಕಾನೂನಿನ ಅರಿವು ಮೂಡಿಸಬಹುದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಕಾನೂನು ಅರಿವು ಕುರಿತ ಸುದ್ದಿಗಳನ್ನು ಬಿತ್ತರಿಸಿ ಜನರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಜಿ.ನರೇಂದರ್ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ವಸ್ತು ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮತ್ತಿತರರು ಇದ್ದರು.
ಸೌಲಭ್ಯ ವಿತರಣೆ : ವಿವಿಧ ಇಲಾಖೆಗಳ ವಿವಿಧ ಯೋಜನೆಗಳಡಿ ಸುಮಾರು 64 ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಇದೇ ವೇಳೆ ಕಾನೂನು ಅರಿವು ಕುರಿತ ಅಲೆಗಳು ಮತ್ತು ಕಾನೂನಿನ ಬೆಳಕು ಎಂಬ ಕವನ ಸಂಕಲನಗಳನ್ನೂ ಬಿಡುಗಡೆ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನ್ಯಾಯಾಧೀಶರು ವಿವಿಧ ಇಲಾಖಾವಾರು ಏರ್ಪಡಿಸಿದ್ದ ವಸ್ತುಪ್ರದರ್ಶನ ವೀಕ್ಷಿಸಿದರು. ಕಾರ್ಯಕ್ರಮದ ಬಳಿಕ ನಗರದಾದ್ಯಂತ ಕಾನೂನು ಅರಿವು ಮೂಡಿಸುವ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.
ರಾಜ್ಯದ 29 ಸಾವಿರ ಹಳ್ಳಿಗಳಲ್ಲಿಯೂ ಸೇವಾ ಪ್ರಾಧಿಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಯೋಜನೆ ರೂಪಿಸಲಾಗಿದೆ. ಮಹಿಳೆ, ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಅರಿವು ನೆರವು ಪಡೆದುಕೊಳ್ಳಬಹುದು. ಎಚ್.ಶಶಿಧರ ಶೆಟ್ಟಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ