ಕಟಕೋಳ, ಬೆಳಗಾವಿ: ಸಮುದಾಯದ ಋಣ ತೀರಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ ಯುವಕರಿಗೆ ಉದ್ಯೋಗ ನೀಡಬೇಕೆಂದು ಅರಿತು ಸರ್ವರ ಸಹಕಾರದೊಂದಿಗೆ ಉದ್ಯೋಗ ಮೇಳ ಮಾಡುತ್ತಿದ್ದೇನೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಬೆಳಗಾವಿ ಗ್ರಾಮೀಣ ಘಟಕದ ಅಧ್ಯಕ್ಷೆ ರೇಖಾ ಚಿನ್ನಾಕಟ್ಟಿ ಹೇಳಿದರು.
ಸಮೀಪದ ಗೊಡಚಿ ಗ್ರಾಮದಲ್ಲಿ ಜಿ.ಎಂ. ಇಂಡಸ್ಟ್ರೀಜ್ ಕಟಕೋಳ ರಾಮದುರ್ಗ, ಸಹೋದರಿ ನಿವೇದಿತಾ ಹಾಗೂ ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ಜನ್ಮ ದಿನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರಾಮದುರ್ಗ ವಿಧಾನಸಭಾ ಕ್ಷೇತ್ರದ ಬೃಹತ್ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವಕರು ಉದ್ಯೋಗ ಪಡೆದುಕೊಂಡಲ್ಲಿ ಅವರ ಕೌಟುಂಬಿಕ ಜೀವನದ ಜತೆಗೆ ಸಾಮಾಜಿಕ ಜೀವನವೂ ಸುಂದರವಾಗಲಿದೆ. ಪ್ರತಿಭೆಗೆ ತಕ್ಕಂತೆ ಉದ್ಯೋಗ ದೊರೆತದಲ್ಲಿ ಮಾತ್ರ ಸರ್ವರೂ ಆರ್ಥಿಕ ಸದೃಢವಾಗಲು ಸಾಧ್ಯ ಎಂದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಆಯೋಜಿಸಿದೆ. ಯುವಕರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಟಕೋಳ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ಸುಣದೋಳಿ ಸಾತಲಿಂಗೇಶ್ವರ ಚೌಕಿಮಠದ ನಾಗಭೂಷನ್ ಸ್ವಾಮೀಜಿ, ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ತೊಂಡಿಕಟ್ಟಿ ಗಾಳೇಶ್ವರ ಮಠದ ವೆಂಕಟೇಶ ಮಹಾರಾಜರು, ತುಳಜಾಭವಾನಿ ಮಾತಾಜಿ ಸೇರಿ ಹಲವು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ನ್ಯಾಯವಾದಿ ಪಿ.ಎಂ. ಜಗತಾಪ, ರಾಜಕುಮಾರ ಸಾದಾಯಿ, ಶಂಕರ ಹುರಕಡ್ಲಿ, ಚುಂಚನೂರ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಮಾದರ, ಬಿ.ಬಿ. ದ್ಯಾಮನಗೌಡ್ರ, ಈರನಗೌಡ ಪಾಟೀಲ, ಶಿವಾನಂದ ಮಮದಾಪೂರ, ರಮೇಶ ಚುನಾಮದಾರ, ಬಿ.ಎಚ್. ದೇಸಾಯಿ, ಮಹಾಂತೇಶ ಪಮ್ಮಾರ, ಮಹಾದೇವ ಚಿನ್ನಾಕಟ್ಟಿ, ರಂಗನಾಥ ಪಾಟೀಲ ಇತರರಿದ್ದರು.