ಜಿಲ್ಲೆ

ಸರ್ವರ ಮೇಲಿದೆ ಸಾಮಾಜಿಕ ಜವಾಬ್ದಾರಿ

ಚಿತ್ರದುರ್ಗ: ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಜವಾಬ್ದಾರಿ ಪ್ರತಿ ಬರಹಗಾರನ ಮೇಲಿದೆ ಎಂದು ಸಾಹಿತಿ ಮೈಸೂರಿನ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ನಗರದ ಅಭಿರುಚಿ ಸಾಹಿತ್ಯಕ-ಸಾಂಸ್ಕೃತಿಕ ವೇದಿಕೆ, ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ಲೇಖಕ ಡಾ.ದೊಡ್ಡಮಲ್ಲಯ್ಯ ಅವರ ‘ಕಂಡುಂಡ ಕಥೆಗಳು’ ಹಾಗೂ ‘ಮೂಕಲಹರಿ’ ಕೃತಿಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಎಲ್ಲ ವರ್ಗಗಳ ಮೇಲೂ ಸಮಾಜ ಪರಿವರ್ತನೆಯ ಹೊಣೆಗಾರಿಕೆಯಿದೆ. ಬದುಕೆನ್ನುವುದು ದೊಡ್ಡದು. ಪಶುವೈದ್ಯ ಡಾ.ದೊಡ್ಡಮಲ್ಲಯ್ಯ ಅವರು ಸಾಹಿತ್ಯಾಸಕ್ತಿಯನ್ನು ಉತ್ತಮವಾಗಿ ರೂಢಿಸಿಕೊಂಡಿದ್ದಾರೆ. ಎಲ್ಲ ಮನಸ್ಸುಗಳು ಒಟ್ಟಿಗೆ ಬೆರೆಯಬೇಕಾದರೆ ಇಂತಹ ಕಾರ‌್ಯಕ್ರಮಗಳ ಅಗತ್ಯವಿದೆ ಎಂದರು.
ಅಂಬೇಡ್ಕರ್, ರಾಮ್‌ಮನೋಹರ ಲೋಹಿಯಾ ಅವರ ಕೊಡುಗೆ ಸಮಾಜಕ್ಕೆ ದೊಡ್ಡದಿದೆ. ಬುಡಕಟ್ಟು ಸಮುದಾಯದ ಜೀವನ ಪದ್ಧತಿ, ಆರೋಗ್ಯಕರ ಚಿಂತನೆ ಕುರಿತು ಕೃತಿಗಳಲ್ಲಿವೆ. ಪ್ರಜಾಪ್ರಭುತ್ವದಲ್ಲಿ ಸತ್ಯವಿರಬೇಕು. ಕಾಡುಗೊಲ್ಲ ಸಮುದಾಯ ಮುಗ್ಧತೆಯ ಪ್ರತಿರೂಪ ಎಂದು ಹೇಳಿದರು.
ಎಡಿಸಿ ಕುಮಾರಸ್ವಾಮಿ ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಾಹಿತಿ ಸಿ.ಸೋಮಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ವೀರೇಂದ್ರಕುಮಾರ್, ಹೋರಾಟಗಾರ ಮಂಜುನಾಥ ಅದ್ದೆ, ಶಿವಮೊಗ್ಗ ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಸ್.ಬಿ.ರವಿಕುಮಾರ್, ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಎಸ್.ಕಲ್ಲಪ್ಪ, ಬೆಂಗಳೂರು ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಡಾ.ಡಿ.ಎಂ.ಅಭಿನವ್ ಮತ್ತಿತರರು ಇದ್ದರು. ಗಂಗಾಧರ್ ತಂಡದವರು ಪ್ರಾರ್ಥಿಸಿದರು. ಜಯಾಪ್ರಾಣೇಶ್ ನಿರೂಪಿಸಿದರು.

*ಕೋಟ್
ಸಾಮಾಜಿಕ ಜಾಲತಾಣಗಳೆಂಬ ಮಾಯಾಲೋಕದಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಸೃಜನಶೀಲ ಬರವಣಿಗೆ ಮಂದಗತಿಯತ್ತ ಸಾಗಿದೆ. ಕಂಪ್ಯೂಟರ್ ಯುಗದಲ್ಲಿ ಕೈಬರವಣಿಗೆಯೇ ಕಾಣೆಯಾಗಿದ್ದು, ಸಾಹಿತ್ಯವು, ಕನ್ನಡಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಾಗಿದೆ. ಪುಸ್ತಕಗಳು ತೋರಿಕೆಗೆ ಮನೆಯಲ್ಲಿ ಇರುವಂತಾಗಬಾರದು.
ಬಿ.ಟಿ.ಕುಮಾರಸ್ವಾಮಿ, ಎಡಿಸಿ