ಆಲೂರು: ಜಗತ್ತು ಕಂಡ ಮಹಾನ್ ಚಿಂತಕ ಬಸವಣ್ಣನ ತತ್ವ, ಆದರ್ಶ, ಸಂದೇಶಗಳು ಸೂರ್ಯ, ಚಂದ್ರರು ಇರುವವರೆಗೂ ಅಜರಾಮರ ಎಂದು ತಹಸೀಲ್ದಾರ್ ಎಚ್.ಪ್ರಾಣೇಶ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಬಸವಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನ ವಚನಗಳು ಎಲ್ಲರಿಗೂ ದಾರಿದೀಪವಾಗಿವೆ. ಮನುಕುಲಕ್ಕೆ ಮಹಾ ಸಂದೇಶ ನೀಡಿದ ಬಸವಣ್ಣರು 12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ, ಸರ್ವಧರ್ಮೀಯರಿಗೂ ಅನುಕರಣೀಯ ಎಂದು ಬಣ್ಣಿಸಿದರು.
ನಿವೃತ್ತ ಶಿಕ್ಷಣಾಧಿಕಾರಿ ಎಂ.ಬಿ. ವಿಜಯಕಾಂತ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಡಾ.ಜಯರಾಜ್ ಮಾತನಾಡಿದರು. ಉಪತಹಸೀಲ್ದಾರ್ ಅಶೋಕ್, ಶಿರಸ್ತೇದಾರ್ ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್, ತಾಲೂಕು ವೀರಶೈವ ಸಂಘದ ಉಪಾಧ್ಯಕ್ಷ ಡಿ.ಎಸ್. ಜಯಣ್ಣ, ಖಜಾಂಚಿ ಟೀಕರಾಜ್ ಇತರರಿದ್ದರು.