ಜಿಲ್ಲೆ

ಸರ್ವಧರ್ಮವನ್ನು ಗೌರವಿಸುವ ಗುಣ ಸ್ಕೌಟ್ಸ್-ಗೈಡ್ಸ್‌ನಿಂದ ಬೆಳೆಯಲಿದೆ

ಚಿತ್ರದುರ್ಗ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಸರ್ವ ಧರ್ಮವನ್ನು ಗೌರವಿಸುವ ಗುಣ ಬೆಳೆಯುತ್ತದೆ ಎಂದು ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆ, ಸಮಯಪ್ರಜ್ಞೆ, ಏಕಾಗ್ರತೆ ಬೆಳೆಯಲೂ ಸಂಸ್ಥೆ ಸಹಕಾರಿಯಾಗಿದೆ ಎಂದರು.

ಭಾಷಣ, ಸರ್ಕಾರದ ಆದೇಶಗಳಿಂದ ಸಮಾಜ ಸುಧಾರಣೆ ಆಗುವುದಿಲ್ಲ. ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಕಾಲನಿಗಳಲ್ಲಿಯೂ ಸಂಸ್ಥೆಯಿಂದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಮಾಜದ ಕೈಗನ್ನಡಿಯಾಗಿದ್ದು, ಏನಾದರೂ ಬದಲಾವಣೆ ತರಬೇಕಾದರೆ ಶಿಸ್ತು ಬಹಳ ಮುಖ್ಯ. ಸಂಸ್ಥೆಯನ್ನು ನಮ್ಮ ರಾಜ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಜೂನ್, ಜುಲೈ, ಆಗಸ್ಟ್ 3 ತಿಂಗಳಲ್ಲಿ ಹೊಸ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಯೂನಿಟ್ ನಡೆಸಿ ತರಬೇತಿ ಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕಿವಿಮಾತು ಹೇಳಿದರು.

ಸಂಸ್ಥೆಗೆ ಜಿಲ್ಲೆಯಲ್ಲೂ ದೊಡ್ಡ ಇತಿಹಾಸವಿದೆ. 1907ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು. ಕೊಂಡಜ್ಜಿಬಸಪ್ಪ, ಪಿ.ಶಿವಶಂಕರ್, ಶಂಕರ್‌ನಾರಾಯಣ್, ದೀನದಯಾಳ್ ನಾಯ್ಡು ಸೇರಿ ಏಳು ಮಂದಿ ಪ್ರಮುಖರು ಮುಖ್ಯ ಆಯುಕ್ತರಾಗಿ ಸಂಸ್ಥೆಗೆ ದುಡಿದಿದ್ದಾರೆ. ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ, ಹೋ.ಚಿ.ಬೋರಯ್ಯ, ಇಮಾಂಸಾಬ್ ಹೆಸರನ್ನು ಮರೆಯುವಂತಿಲ್ಲ ಎಂದರು.

ಬರಪೀಡಿತ ಚಿತ್ರದುರ್ಗ ಜಿಲ್ಲೆ ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿದೆ. ಹೀಗಾಗಿ ಈ ಭಾಗದವರಿಗೆ ನೀರಿನ ಮಹತ್ವದ ಅರಿವಿದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭಾವಂತರಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಯಾವ ಕಾರಣಕ್ಕೂ ರಾಜಕಾರಣ ಬೇಡ. 2023-24ನೇ ಸಾಲಿನಲ್ಲಿ 1.5 ಲಕ್ಷ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದು, ಈ ಬಾರಿ 2 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸರ್ಕಾರ, ಸಾರ್ವಜನಿಕರ ಪ್ರೋತ್ಸಾಹ ಕೂಡ ಮುಖ್ಯ ಎಂದು ಮನವಿ ಮಾಡಿದರು.

ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಚಿತ್ರದುರ್ಗದಲ್ಲಿ 1963ರಲ್ಲಿ ಸಂಸ್ಥೆ ಆರಂಭವಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಯೋಜನವಾಗಲಿ ಎಂಬ ಕಾರಣಕ್ಕಾಗಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಇದರ ಬೆಳವಣಿಗೆಯೊಂದೆ ನಮ್ಮ ಧ್ಯೇಯೋದ್ದೇಶವಾಗಿದೆ ಎಂದರು.

ಡಾನ್‌ಬಾಸ್ಕೋ ಶಿಕ್ಷಣ ಸಂಸ್ಥೆಯ ಸಜ್ಜಿ ಫಾದರ್, ಸ್ಕೌಟ್ಸ್ ಆಯುಕ್ತ ಬಿಇಒ ಎಸ್.ನಾಗಭೂಷಣ್, ಸಂಸ್ಥೆ ಜಿಲ್ಲಾ ಉಪಾಧ್ಯಕ್ಷರಾದ ಜಿ.ಎಸ್.ಉಜ್ಜಿನಪ್ಪ, ಪರಮೇಶ್, ಗೈಡ್ಸ್ ಆಯುಕ್ತೆ ಸವಿತಾ ಶಿವಕುಮಾರ್, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಶೀಲಾ ಮಂಜುನಾಥ್, ಡಾ.ರಹಮತ್ ಉಲ್ಲಾ, ತರಬೇತುದಾರ ಚಂದ್ರಪ್ರಕಾಶ್ ಇತರರಿದ್ದರು.