ಬಾಗಲಕೋಟೆ: ಪ್ರತಿಯೊಬ್ಬರ ಮನುಷ್ಯನ ಮಾನಸಿಕ, ದೈಹಿಕ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಶ್ಯವಾಗಿವೆ ಎಂದು ಜಿಲ್ಲಾಽಕಾರಿ ಪಿ.ಸುನೀಲ್‌ಕುಮಾರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಎಲ್ಲ ವೃಂದ ಸಂಘಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಂಡ ಕ್ರೀಡೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒತ್ತಡದ ಬದುಕಿನಿಂದ ಹೊರಬರಲು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಸದೃಢ ಆರೋಗ್ಯದ ಬದಕು ಸಾಧ್ಯವಿದೆ. ಕ್ರೀಡೆಯಿಂದ ದೈಹಿಕವಾಗಿ ಬಲಾಡ್ಯವಾದರೆ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಾನಸಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಗಳು ಅನಾಽಕಾಲದಿಂದ ಬಂದಿದ್ದರಿಂದ ಅವುಗಳನ್ನು ಪ್ರಚಲಿತಗೊಳಿಸಿ ಸುಂದರ ಬದುಕು ಸಾಗಿಸಬೇಕು ಎಂದರು.
ಜಿ.ಪಂ ಸಿಇಒ ಟಿ.ಭೂಬಾಲನ ಮಾತನಾಡಿ, ಇಂದಿನ ಕಲುಷಿತ ವಾತಾವರಣ, ಗುಣಮಟ್ಟವಿಲ್ಲದ ಆಹಾರ ಸೇವನೆಯಿಂದ ಕಾರ್ಯದ ಒತ್ತಡದಿಂದ ಪ್ರತಿಯೊಬ್ಬ ವ್ಯಕ್ತಿ ಬಳಲುತ್ತಿದ್ದು, ಇದನ್ನು ಸರಳೀಕರಣಗೊಳಿಸಬೇಕಾದರೆ ದಿನದ ಒಂದು ಗಂಟೆಯಾದರೆ ಕ್ರೀಡೆ, ಯೋಗ, ಆಸನ ಹಾಗೂ ಸಾಂಸ್ಕೃತಿ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಎಷ್ಟೇ ಒತ್ತಡವಿದ್ದರೂ ಆ ಕಾರ್ಯ ಸರಾಗವಾಗಿ ಮಾಡಬಹುದಾಗಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಲಾಯಿತು. ಕ್ರೀಡಾ ಜ್ಯೋತಿಯನ್ನು ಸಹ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಯುಕೆಪಿ ಮಹಾವ್ಯವಸ್ಥಾಪಕ ರಾಹುಲ್ ಕುಮಾರ ರತ್ನ ಸಿಂಧೆ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಯೋಜನಾ ನಿರ್ದೇಶಕ ಕೆ.ಆರ್.ಮುಂಡರಗಿ, ಯೋಜನಾ ನಿರ್ದೇಶಕಿ ನಿರ್ಮಲ, ಪಿಡಿಒ ಸಂಘದ ಜಿಲ್ಲಾ ಅಧ್ಯಕ್ಷ ರಾಜು ವಾರದ, ಗ್ರಾ.ಪಂ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಈಶ್ವರ ಹುದ್ದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.