ಮೈಸೂರು: ಸರ್ವಜ್ಞ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳುವುದು ಮುಖ್ಯ. ಅವರು ನಮಗೆ ಕೊಟ್ಟಿರುವಂತಹ ಕೊಡುಗೆ ಅಪಾರವಾದದ್ದು, ಸರ್ವಜ್ಞನಂತಹವರು ನಮ್ಮ ಹೆಮ್ಮೆ. ಅಂತಹವರ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ವಜ್ಞ ಸಾವಿರಾರು ವಚನ ರಚಿಸಿದ್ದು, ಅವರ ವಚನಗಳಲ್ಲಿ ಇರುವ ಸಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಧನೆ ಮಾಡುವುದಕ್ಕೆ ವಯಸ್ಸು ಮುಖ್ಯವಲ್ಲ. ಸಾಧನೆ ಮಾಡುವುದಕ್ಕೆ ಛಲ, ಮನಸ್ಸು ಹಾಗೂ ಆಸಕ್ತಿ ಇರಬೇಕು ಎಂದು ಹೇಳಿದರು.
ಸರ್ವಜ್ಞನ ತ್ರಿಪದಿಗಳು ಸರಳತೆ ಹಾಗೂ ಪ್ರಾಸಬದ್ಧತೆಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ನೈತಿಕ, ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳನ್ನು ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಸೇರಿಸಿದ್ದಾರೆ. ಅದನ್ನು ನೀವು ತಿಳಿದುಕೊಳ್ಳಬೇಕು ಎಂದರು.
ಜಯಂತಿ ಕಾರ್ಯಕ್ರಮಗಳು ಮುಂದಿನ ಪೀಳಿಗೆಯವರಿಗೆ ದಾರಿಯಾಗಿದೆ. ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರಬೇಕು. ಅವರಿಗೂ ವಚನ, ಸಾಹಿತ್ಯದ ಬಗ್ಗೆ ತಿಳವಳಿಕೆ ಮೂಡಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಸರ್ವಜ್ಞ ಸರ್ವ ವ್ಯಾಪಿ ಎಂಬುದು ಸರ್ವ ಸತ್ಯ. ಅವರ ಒಂದು ಅಂಶವನ್ನಾದರೂ ಅಳವಸಿಡಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.
ಸರ್ವ ವ್ಯಾಪ್ತಿಯಾಗಿ ಎಲ್ಲದರ ಬಗ್ಗೆಯೂ ಸರ್ವಜ್ಞ ತಿಳಿದು ಬರೆದಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ಹೇಳುವುದರ ಮೂಲಕ ಮೂಢನಂಬಿಕೆ ತೊಡೆದುಹಾಕಿ ಇಡೀ ಸಮಾಜಕ್ಕೆ ಅರಿವು ಮೂಡಿಸಿದ್ದಾರೆ ಎಂದು ತಿಳಿಸಿದರು.
ಸರ್ವಜ್ಞರ ಎಲ್ಲರಿಗೂ ಮಾದರಿ. ಅವರ ತತ್ವಗಳು ನಾವು ಪಾಲನೆ ಮಾಡಬೇಕು. ಮಕ್ಕಳಲ್ಲೂ ಅಳವಡಿಸಬೇಕು. ಸರ್ವಜ್ಞರು ಎಲ್ಲರಿಗೂ ಮಾದರಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಜ್ಞರ ಜಯಂತಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಅವರ ಆದರ್ಶ ಮತ್ತು ತತ್ವಗಳನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ಪ್ರಯತ್ನ ಮಾಡಬೇಕು.
ಬರೀ ಜಯಂತಿಗೆ ಮಾತ್ರ ಸೀಮಿತವಾಗದೆ ಅವರ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸಿ ಅವರ ವಚನಗಳು ಹಾಗೂ ಚಿಂತನೆಗಳ ಚರ್ಚೆ ಪ್ರಾರಂಭವಾಗುವಂತೆ ಮಾಡಬೇಕು. ಸರ್ವಜ್ಞನ ವಚನಗಳು ಸಾರ್ವಜನಿಕವಾಗಿ ಮುಂದಿನ ಜನಾಂಗಗಳಿಗೆ ತಲುಪಿಸಬೇಕು ಎಂದು ಹೇಳಿದರು.
ಮಡಿಕೇರಿ, ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಡಾ.ಸಿ.ರೇಣುಕಾಂಬ ಮಾತನಾಡಿ, ಕನ್ನಡ ವಾಗ್ದೇವಿ ತನ್ನ ಬಾಹುಗಳಿಂದ ಅನೇಕ ವ್ಯಕ್ತಿಗಳನ್ನು ರೂಪಿಸಿದ್ದಾರೆ. ಅಂತಹ ವಾಗ್ದೇವಿಯ ಪುತ್ರರಾಗಿರುವವರಲ್ಲಿ ಸರ್ವಜ್ಞರು ಒಬ್ಬ ಎಂದು ಹೇಳಿದರು.
ಸರ್ವಜ್ಞ ಎಂಬುದು ಹೆಸರಲ್ಲಿಯೇ ಅಡಗಿದೆ. ಸರ್ವಜ್ಞ ಎಂದರೆ ದೇವರು. ಎಲ್ಲವನ್ನೂ ತಿಳಿದ ವ್ಯಕ್ತಿಯನ್ನು ದೇವರು ಎಂದು ಕರೆಯಲಾಗುತ್ತದೆ. ಇಂತಹ ರೀತಿಯ ನಾಮಾಂಕಿತ ಪ್ರಪಂಚದ ಯಾವುದೇ ರಾಷ್ಟ್ರದ ಕವಿಗಳಿಗೆ ಸಿಕ್ಕಿಲ್ಲ ಎಂದು ತಿಳಿಸಿದರು.
ಇವರು ಇಡೀ ಪ್ರಪಂಚದಲ್ಲೇ ಅಮರ ಕವಿ. ಕನ್ನಡ ಭಾಷೆ ಹಾಗೂ ಆಡು ಭಾಷೆಗೆ ಇವರ ಕೊಡುಗೆ ಅಪಾರವಾಗಿದೆ. ಇವರು ಜನತಾ ಕವಿಯಾಗಿದ್ದರು. ಜನರ ಮಧ್ಯೆಯಲ್ಲೇ ಕನ್ನಡವನ್ನು ಉತ್ತುಂಗಕ್ಕೇರಿಸಿದವರು ಕವಿ ಸರ್ವಜ್ಞ ಮಾತ್ರ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಶ್ರೀನಿವಾಸ್, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಡಿ.ಎಸ್ ಕೃಷ್ಣ ಪ್ರಸಾದ್, ಶಾಲಿವಾಹನ ವಿವಿಧೋದ್ದೇಶ ಕೈಗಾರಿಕಾ ಸಂಘದ ಮಂಜುನಾಥ, ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಆರ್ ಸೋಮಶೇಖರ್, ಕರ್ನಾಟಕ ಜಾಗೃತಿ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷರಾದ ಕೆ.ಶಿವರಾಮ್ ಇನ್ನಿತರರಿದ್ದರು.