ಬೀದರ್: ಮಹಾನ್ ಜ್ಞಾನಿ ಸರ್ವಜ್ಞ ಅವರ ತ್ರಿಪದಿಗಳು ಉತ್ತಮ ಸಮಾಜಕ್ಕೆ ದಾರಿ ದೀಪ. ಬಡವರ ಪರ ಕಾಳಜಿ ಹೊಂದಿದ್ದ ಶ್ರೇಷ್ಠ ಚಿಂತಕ ಅವರಾಗಿದ್ದರು. ಎಲ್ಲ ವಿಷಯ ನಿರ್ಭಯವಾಗಿ ತ್ರಿಪದಿಗಳ ಮೂಲಕ ತಿಳಿಸಿದ ಮಹಾನ್ ಬುದ್ಧಿಜೀವಿ. ಅವರ ಚಿಂತನೆಗಳು ಎಂದಿಗೂ ಪ್ರಸ್ತುತ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ ಕವಿ ಸರ್ವಜ್ಞ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕವಿ ಸರ್ವಜ್ಞರು ಸಮಾಜಕ್ಕೆ ಮಾರಕವಾಗಿದ್ದ ಜಾತಿ ವ್ಯವಸ್ಥೆ, ಅಸಮಾನತೆ, ಮೂಢನಂಬಿಕೆಯಂಥ ನಾನಾ ಸಮಸ್ಯೆಗಳ ಕುರಿತು ತ್ರಿಪದಿಗಳ ಮೂಲಕ ನೇರವಾಗಿ ಹೇಳುತ್ತಿದ್ದರು. ಅವರ ವಿಚಾರಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿವೆ ಎಂದರು.
ಸಮಾಜದಲ್ಲಿ ಕುಂಬಾರ ಸಮುದಾಯದ ಪಾತ್ರ ಬಹುಮುಖ್ಯವಾಗಿದೆ. ಕಾಲಕ್ಕನುಗುಣ ಇವರು ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ವೈದ್ಯ, ಇಂಜಿನೀಯರ್ ಸೇರಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಪ್ರೋತ್ಸಾಹಿಸಬೇಕು. ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಯುವ ಸಾಹಿತಿ ಬಾಲಾಜಿ ಕುಂಬಾರ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಮಾಜದ ಮುಖಂಡರಾದ ಕಾಶೀನಾಥ ಕುಂಬಾರ, ಕಾಮಶೆಟ್ಟಿ ಕುಂಬಾರ, ದತ್ತಾತ್ರಿ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ರಾಜಕುಮಾರ ಕುಂಬಾರ, ಪ್ರಕಾಶ ಕುಂಬಾರ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಣೆ ಮಾಡಿದರು.