ಜಿಲ್ಲೆ

ಸರ್ವ ಸಮಾಜವನ್ನು ಒಟ್ಟಾಗಿ ಕೊಂಡೊಯ್ಯುವ ಸಂಕಲ್ಪ

ಅರಸೀಕೆರೆ : ತಾಲೂಕಿನ ಕಣಕಟ್ಟೆ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಎನ್.ಆರ್ ಸಂತೋಷ್ ಭಾನುವಾರ ಮಧ್ಯಾಹ್ನ ಸಹಸ್ರಾರು ಮಹಿಳೆಯರೊಂದಿಗೆ ಆಗಮಿಸಿ ಬಾಗಿನ ಸಮರ್ಪಿಸುವ ಮೂಲಕ ಪ್ರಚಂಡ ಶಕ್ತಿ ಪ್ರದರ್ಶನ ನಡೆಸಿದರು.

ಅಲ್ಲದೇ ವೀರಭದ್ರೇಶ್ವರ ಪ್ರೌಡಶಾಲಾ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ವ ಸಮುದಾಯಗಳನ್ನು ಒಗ್ಗೂಡಿಸಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸಿದ್ದರು. ವೇದವನೋದಿ ಹಾರವನಾದ, ಕಾಸಿ ಕಮ್ಮಾರ ,ಬೀಸಿ ಮಡಿವಾಳನಾದ ,ಹಸನಿಕ್ಕಿ ಸಾಲಿಗನಾದ ಎನ್ನವಂತೆ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿ ಒಟ್ಟಾಗಿ ಕರೆದೊಯ್ಯುವ ಮೂಲಕ ಹನ್ನೆರಡನೆ ಶತಮಾನದ ಬಸವಾದಿ ಶಿವಶರಣರು ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ಆಶಯದಂತೆ ಕ್ಷೇತ್ರದಲ್ಲಿ ಸರ್ವ ಸಮಾಜವನ್ನು ಒಟ್ಟಾಗಿ ಕೊಂಡೊಯ್ಯುವ ಸಂಕಲ್ಪ ಮಾಡಿದ್ದು ನಿಮ್ಮೆಲ್ಲರ ಆರ್ಶೀವಾದ ನನ್ನ ಮೇಲಿರಲಿ ,ನಿಮ್ಮ ಕೆಲಸ ಕಾರ್ಯಗಳಿಗೆ ಸದಾ ದನಿಯಾಗಿ ನಿಲ್ಲುತ್ತೇನೆ ಎಂದು ವಾಗ್ದಾನ ನೀಡಿದರು.

ತಕ್ಕಪಾಠ: ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದೇನೆ ಎನ್ನುವ ಅಪಪ್ರಚಾರ ಶಾಸಕ ಕೆ.ಎಂ ಶಿವಲಿಂಗೇಗೌಡ ಮತ್ತವರ ಬೆಂಬಲಿಗರಿಂದ ಕೇಳಿ ಬರುತ್ತಿದೆ. ಉತ್ತಮ ಸಂಸ್ಕೃತಿ ,ಸಂಸ್ಕಾರದ ಕುಟುಂಬದಿಂದ ಬಂದಿದ್ದು ಅಂತಹ ಹೀನ ಕೃತ್ಯ ಮಾಡಿಸುವ ಪ್ರವೃತ್ತಿ ನಮ್ಮದಲ. ಕೆಲ ತಿಂಗಳ ಹಿಂದೆ ಸ್ಥಳೀಯ ಬಿಜೆಪಿ ಮುಖಂಡ ರಾಂಪುರ ಶೇಖರಪ್ಪ ಮನೆ ಮೇಲೆ ರಾತ್ರೋ ರಾತ್ರಿ ಕಲ್ಲು ತೂರಾಟ ನಡೆಸಿದವರು ಯಾರು? ,ಜೀವ ಬೆದರಿಕೆ ಒಡ್ಡಿದವರು ಯಾರು?, ಡಿ.ಎಂ ಕುರ್ಕೆಯಲ್ಲಿ ಅಮಾನವೀಯ ಹಲ್ಲೆ ನಡೆಸಿ ಪ್ರಕ್ಷುಬ್ದ ಸನ್ನಿವೇಶ ನಿರ್ಮಿಸಿದವರು ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಲಿ .ಅದನ್ನು ಬಿಟ್ಟು ಸುಖಾ ಸುಮ್ಮನೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಇಂತಹ ಮೂಲೆ ಸೇರಿರುವ ಮುಖಂಡರ ಹೇಳಿಕೆಗೆ ಎದೆಗುಂದುವ ಜಾಯಮಾನ ನನ್ನದಲ್ಲ.ಇನ್ನು ಮಂದೆ ಪಕ್ಷದ ಸಾಮಾನ್ಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗುಡುಗಿದರು.

ಮುಖಂಡ ಎನ್.ಆರ್.ಸಂತೋಷ್ ಅವರ ತಾಯಿ ಗಿರಿಜಮ್ಮ ಐತಿಹಾಸಿಕ ಸಭೆಯಲ್ಲಿ ಮಾತನಾಡಿ, ನನ್ನ ಪುತ್ರನನ್ನ ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆತನನ್ನು ಬೆಳೆಸಿ, ಪೋಷಿಸಿ ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಿಮ್ಮದಾಗಿದೆ ಎಂದು ನೆರೆದಿದ್ದ ಸಭಿಕರಲ್ಲಿ ಮನವಿ ಮಾಡಿದರು.

ಕಣ್ಣೀರಿಟ್ಟ ಮುಖಂಡ :

ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಲಗೊಳ್ಳುತ್ತಿರುವುದನ್ನು ಶಾಸಕ ಕೆ.ಎಂ ಶಿವಲಿಂಗೇಗೌಡ ಹಾಗೂ ಮತ್ತವರ ಬೆಂಬಲಿಗರು ಸಹಿಸುತ್ತಿಲ್ಲ. ನಮ್ಮ ಕುಟುಂಬ ಸದಸ್ಯರನ್ನೇ ಪರೋಕ್ಷವಾಗಿ ಎತ್ತಿಕಟ್ಟಿ ಕಲ್ಲು ತೂರಾಟ ನಡೆಸುವ ಕೀಳುಮಟ್ಟಕ್ಕಿಳಿದಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಸಂತೋಷ್ ಬೆನ್ನಿಗೆ ನಿಂತಿದ್ದು ನಮ್ಮೆಲ್ಲರಿಗೂ ಶಕ್ತಿ ತುಂಬಬೇಕು ಎಂದು ಸಭೆಯಲ್ಲಿ ಬಿಜೆಪಿ ಮುಖಂಡ ರಾಂಪುರ ಶೇಖರಪ್ಪ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

ಇದಕ್ಕೂ ಮುನ್ನ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ದಿ.ಲಾಲ್‌ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪಷ್ಪನಮನ ಸಲ್ಲಿಸಲಾಯಿತು. ಸಹಸ್ರಾರು ಮಹಿಳೆಯರಿಗೆ ಮಡಿಲಕ್ಕಿ, ಸೀರೆ ಕಣ ವಿತರಿಸಲಾಯಿತು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟನಕಟ್ಟೆ ದಿನೇಶ್, ಮುಖಂಡರಾದ ಹೊಳಲ್ಕೆರೆ ಸತೀಶ್ ,ಕಲ್ಲುಸಾದರಹಳ್ಳಿ ನಂದೀಶ್, ದಯಾನಂದ್, ರಮೇಶ್ ನಾಯ್ಡು, ಭಾಸ್ಕರ್, ವೈ.ಕೆ ದೇವರಾಜ್,ಮಂಜುನಾಥ್, ರಘು ಸೇರಿ ಹಲವು ಮುಖಂಡರು ಸಾಥ್ ನೀಡಿದರು.