ಜಿಲ್ಲೆ

ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ: ಡಾ.ಚೌಡಯ್ಯ ಕಟ್ನವಾಡಿ

ಹೊಳೆನರಸೀಪುರ: ಪ್ರತಿಯೊಂದು ಶಾಲೆಯಲ್ಲಿಯೂ ಎಲ್ಲಾ ವರ್ಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುತ್ತಾರೆ. ಅದೇ ರೀತಿಯಲ್ಲಿ ವಿವಿಧ ರೀತಿಯ ಅನುಭವ ಮತ್ತು ಜ್ಞಾನವನ್ನು ಹೊಂದಿರುವ ಶಿಕ್ಷಕರು ಪಾಠ ಕಲಿಸುತ್ತಾರೆ. ಆದ್ದರಿಂದ ಶಾಲೆಯು ಕುವೆಂಪು ಅವರು ಹೇಳಿರುವಂತೆ ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ ಎಂದು ದೊಡ್ಡಕಾಡನೂರು ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ ಅಭಿಪ್ರಾಯ ಪಟ್ಟರು.

   ತಾಲ್ಲೂಕಿನ ದೊಡ್ಡಕಾಡನೂರು ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರೋಪ ಭಾಷಣ ಮಾಡಿದ ಇವರು, ಸಿದ್ದಾರ್ಥನಿಗೆ ಹೊರಗಿನ ಜ್ಞಾನವೇ ಇರಬಾರದು ಎಂದು ಅವರ ತಂದೆ ಅರಮನೆಯಲ್ಲಿಯೇ ಎಲ್ಲಾ ರೀತಿಯ ಶಿಕ್ಷಣ ಕೊಡಿಸಿದ್ದರು. ಆದರೇ ಸಿದ್ಧಾರ್ಥ ಅರಮನೆಯಿಂದ ಹೊರಗೆ ಬಂದ ಮೇಲೆ ನಿಜವಾದ ಜ್ಞಾನ ಸಂಪಾದನೆ ಮಾಡುತ್ತಾನೆ, ಜ್ಞಾನೋದಯವಾಗಿ ಬುದ್ಧನಾಗುತ್ತಾನೆ. ಲೋಕದ ದುಃಖಕ್ಕೆ ಆಸೆಯೇ ಮೂಲ ಎಂದು ಹೇಳುತ್ತಾನೆ. ಹಾಗೂ ಬುದ್ಧ ನಿನ್ನನ್ನು ಯಾರು ಸಹ ಬೆಳೆಸಲು, ಉಳಿಸಲು ಸಾಧ್ಯವಿಲ್ಲ. ನಿನಗೆ ನೀನೆ ಬೆಳಕು ಎಂದು ಹೇಳಿದ್ದಾನೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ತಮ್ಮ ಮನೆಯ ಪರಿಸರವನ್ನು ಓದುವ ಪರಿಸರವಾಗಿ ಪರಿವರ್ತನೆ ಮಾಡಿಕೊಂದು ಜ್ಞಾನ ಸಂಪಾದನೆ ಮಾಡಬೇಕು, ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

  ಜಗಜ್ಯೋತಿ ಬಸವಣ್ಣ ಅವರು ಹೇಳಿರುವುದನ್ನು ನಾವು ಪಾಲಿಸಿದರೆ, ಭೂಲೋಕವೇ ಸ್ವರ್ಗವಾಗುತ್ತದೆ. ಅವರು ಹೇಳಿದ್ದು; ಕಾಯಕವೇ ಕೈಲಾಸ. ಅಂದರೆ ಒಬ್ಬ ವಿದ್ಯಾರ್ಥಿಯ ಕಾಯಕ ಓದುವುದು, ಹಾಗೆಯೇ ಒಬ್ಬ ಶಿಕ್ಷಕನ ಕಾಯಕ ಪಾಠ ಮಾಡುವುದು. ತಂದೆ-ತಾಯಿಗಳ ಕಾಯಕ ಮಕ್ಕಳನ್ನು ಲಾಲನೆ ಪಾಲನೆ ಮಾಡುವುದು. ಅದೇ ರೀತಿ ಪ್ರತಿಯೊಬ್ಬರೂ ತಮ್ಮ ತಮ್ಮ ಕಾಯಕವನ್ನು ಅರಿತು ಮಾಡಿದಾಗ ಅವರ ಜೀವನ ಸ್ವರ್ಗವಾಗಿರುತ್ತದೆ. ಅದೇ ಕೈಲಾಸ ಎಂದು ಕಿವಿ ಮಾತು ಹೇಳಿದರು.

 ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು “ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಠಿಸಲಾರ” ಎಂದು ಹೇಳಿದ್ದಾರೆ. ಅದರ ಅರ್ಥ ವಿದ್ಯಾರ್ಥಿಯಾದವನಿಗೆ ಮೊದಲು ತನ್ನ ಮನೆಯ ಇತಿಹಾಸ ತಿಳಿದಿರಬೇಕು. ತಮ್ಮ ನೆರೆಹೊರೆಯವರ ಇತಿಹಾಸ ತಿಳಿದಿರಬೇಕು. ಯಾವ ವಿದ್ಯಾರ್ಥಿ ಈ ರೀತಿಯ ಇತಿಹಾಸ ತಿಳಿದಿರುತ್ತದೆಯೋ, ಆತ ಮುಂದಿನ ದಿನಗಳಲ್ಲಿ ಇತಿಹಾಸವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

 ಕನಕದಾಸರು ಹೇಳಿರುವಂತೆ; ಕುಲ-ಕುಲವೆಂದು ಹೊಡೆದಾಡದಿರಿ ಜೋಕೆ! ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.., ಬಲ್ಲಿರಾ.., ಎಂದು ಹೇಳಿದ್ದಾರೆ. ಅಲ್ಲದೇ ಅವರ ಮತ್ತೊಂದು ಮಾತು “ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ,” ಆದ್ದರಿಂದ ಎಲ್ಲರೂ ಒಂದೇ, ಪ್ರತಿಯೊಬ್ಬರೂ ಒಂದು ತುತ್ತು ಅನ್ನಕ್ಕಾಗಿ ದುಡಿಯುತ್ತಿದ್ದಾರೆ. ಮನುಷ್ಯ ಬದುಕಿರುವವರೆಗೆ ಯಾರಿಗೂ ತೊಂದರೆ ಕೊಡಬಾರದು. ಏಕೆಂದರೆ ಹುಟ್ಟು ಆಕಸ್ಮಿಕವಾದರೂ ಸಾವು ಖಚಿಚ. ಸಾವು ಶಿವಕುಮಾರ ಮಹಾಸ್ವಾಮಿಗಳವರನ್ನು ಬಿಡಲಿಲ್ಲ. ಸಿದ್ದೇಶ್ವರ ಸ್ವಾಮಿಗಳವರನ್ನು ಬಿಡಲಿಲ್ಲ. ಅಬ್ದುಲ್ ಕಲಾಂ ಅವರನ್ನು ಬಿಟ್ಟಿಲ್ಲ. ಅಂದಮೇಲೆ ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಆದ್ದರಿಂದ ಸ್ವಾರ್ಥ, ಮೋಸ, ಕಪಟ ಬಿಟ್ಟು ಇರುವಷ್ಟು ದಿನ ನೆಮ್ಮದಿಯಾದಿ ಜೀವನ ಸಾಗಿಸಬೇಕೆನ್ನುವ ಬಗ್ಗೆ ತಾವೇ ಸ್ವತಃ ರಚಿಸಿದ್ದ ಕವನವನ್ನು ಓದುವ ಮೂಲಕ ತಿಳಿವಳಿಕೆ ನೀಡಿದರು. 

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿ ಎಸ್ ಮಾಲಿಪಾಟಿಲ್, ಮನುಷ್ಯ ತನ್ನ ಸ್ಥಾನಮಾನವನ್ನು ಅರಿತು ಜೀವನ ಸಾಗಿಸಬೇಕು. ಒಂದು ದಿನ ಇಂದ್ರನು ಕೂಡ ತನ್ನ ಸ್ಥಾನವನ್ನು ಮರೆತು ಭೂಲೋಕದಲ್ಲಿ ಕನಿಷ್ಠ ಪ್ರಮಾಣದ ಜೀವನ ನಡೆಸುತ್ತಿದ್ದನು. ಅವನಿಗೆ ತನ್ನ ಅಂತಸ್ತು ಏನೆಂದು ತಿಳಿದ ಮೇಲೆ, ಇಂದ್ರಲೋಕಕ್ಕೆ ವಾಪಸ್ ಹೋಗುತ್ತಾನೆ. ಅದೇ ರೀತಿ ವಿದ್ಯಾರ್ಥಿಗಳು ಒಳ್ಳೆಯ ಗೆಳೆಯರನ್ನು ಸಂಪಾದನೆ ಮಾಡಬೆಕು. ಕಷ್ಟಕಾಲದಲ್ಲಿ ಗೆಳೆಯರು ನಮಗೆ ಸಹಾಯ ಮಾಡುತ್ತಾರೆ ಎಂದು ಕಿವಿಮಾತು ಹೇಳಿದರು.

  ಕಾರ್ಯಕ್ರಮವು ಪ್ರೌಢಶಾಲಾ ವಿದ್ಯಾರ್ಥಿನಿ ಲಾವಣ್ಯ ಮತ್ತು ತಂಡದವರ ಪ್ರಾಥನೆಯೊಂದಿಗೆ ಪ್ರಾರಂಭವಾಯಿತು. ಪವಿತ್ರ ಸ್ವಾಗತಿಸಿದರು. ಸಹಶಿಕ್ಷಕಿ ಸೂರ್ಯಪ್ರಭ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಸಹಶಿಕ್ಷಕ ಗಂಗಾನಾಯ್ಕ ಪ್ರಾಸ್ತಾವಿಕ ನುಡಿ ಹೇಳಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರ ಪಟ್ಟಿಯನ್ನು ರವಿಕುಮಾರ್ ಮತ್ತು ಅನುಪೂರ್ಣಿಮಾ ಮಂಡಿಸಿದರು. ವೇದಿಕೆಯ ಗಣ್ಯರಿಂದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ತೇಜಸ್ವಿನಿ ವಂದಿಸಿದರು. ಭಾನು ನಿರೂಪಣೆ ಮಾಡಿದರು. ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಚಿತ್ರ: ದೊಡ್ಡಕಾಡನೂರು ಜೆಎಸ್‌ಎಸ್ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಪ್ರಾಂಶುಪಾಲ   ಡಾ.ಚೌಡಯ್ಯ ಕಟ್ನವಾಡಿ, ಜೊತೆಗೆ ಪ್ರೌಢಾಶಾಲಾ ಮುಖ್ಯ ಶಿಕ್ಷಕ ವಿ ಎಸ್ ಮಾಲಿಪಾಟಿಲ್ ಇದ್ದಾರೆ.