ಜಿಲ್ಲೆ

ಸರ್ವ ಜನಾಂಗಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ ಚೇತನ

ಶ್ರೀರಂಗಪಟ್ಟಣ: ಸಮಾಜದ ಸರ್ವ ಜನಾಂಗಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ ಹಾಗೂ ರಾಜಕೀಯ ಭವಿಷ್ಯ ನೀಡಿದ ಮೇರು ಚೇತನ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಬಣ್ಣಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜು ಅರಸು ಅವರ 108ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಅರಸು ಪ್ರಮುಖ ಪಾತ್ರ ವಹಿಸಿದ್ದರು. ಅವರ ಆಡಳಿತ ಅವಧಿಯಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ರಾಜ್ಯದ ಬಡವರ್ಗದ ಜನರಿಗೆ ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಣಕ್ಕಿಳಿಸಿ ಪ್ರಚಂಡ ಗೆಲುವು ತಂದುಕೊಟ್ಟು ದೇಶಕ್ಕೆ ರಾಜ್ಯವನ್ನು ಪರಿಚಯಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ನಿಲಯ ವ್ಯವಸ್ಥೆ ಕಲ್ಪಿಸುವ ಮೂಲಕ ಬಡತನವನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಸಮಾಜದಲ್ಲಿ ಮೇಲು-ಕೀಳು ತೊಡೆದು ಎಲ್ಲರೂ ಒಂದೇ ಎಂದು ಸಂದೇಶ ಸಾರಿದ ಅವರ ಜೀವನ ಚರಿತ್ರೆ ಎಲ್ಲರಿಗೂ ಆದರ್ಶ ಎಂದು ಹೇಳಿದರು.

ತಹಸೀಲ್ದಾರ್ ಜಿ.ಅಶ್ವಿನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೀಣಾ, ತಾಲೂಕು ವಿಸ್ತರಣಾಧಿಕಾರಿ ಪುಷ್ಪಾ, ಪುರಸಭಾ ಸದಸ್ಯ ಗಂಜಾಂ ಕೃಷ್ಣಪ್ಪ, ಬೌದ್ಧ ಮಹಾಸಭಾ ಅಧ್ಯಕ್ಷ ಕೆ.ಟಿ.ರಂಗಯ್ಯ, ಮಡಿವಾಳ ಮಾಚಿದೇವ ಸಂಘಟನೆಯ ಅಧ್ಯಕ್ಷ ಮರಳಗಾಲ ಮಂಜುನಾಥ್, ದಸಂಸ ಮುಖಂಡ ಕುಬೇರ, ಕರವೇ ಚಂದಗಾಲು ಶಂಕರ್, ನಿಲಯ ಪಾಲಕಿ ಜ್ಯೋತಿ ಪ್ರಕಾಶ್, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಸಾರಿಗೆ ನಿಲ್ದಾಣ ನಿಯಂತ್ರಕ ಸೋಮಶೇಖರ್, ಪತ್ರಕರ್ತ ಸಂದೇಶ್ ಉಪಸ್ಥಿತರಿದ್ದರು.