ಜಿಲ್ಲೆ

ಸರ್ವ ಕ್ಷೇತ್ರದಲ್ಲೂ ಮಹಿಳೆಯರ ಅದ್ವಿತೀಯ ಸಾಧನೆ

ಲಲಾಟಾಕ್ಷ ಎಸ್

ಮದ್ದೂರು: ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನಾ ತಿಳಿಸಿದರು.

ನಗರದ ಶ್ರೀ ಮದ್ದೂರಮ್ಮ ಸಮುದಾಯ ಭವನದಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಇಂದು ಸರ್ವ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿ ತೋರಿಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಒಳಿತಿಗಾಗಿ ದುಡಿಯುತ್ತಿದ್ದಾರೆಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ನಾಯಕಿ ಯದುಶೈಲಾ ಸಂಪತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ತಮ್ಮ ಸಾಂಸಾರಿಕ ಜೀವನವನ್ನು ತಕ್ಕಡಿಯಂತೆ ಸರಿ ಸಮಾನವಾಗಿ ತೂಗಿಸಿಕೊಂಡು ಹೋಗಲು ಇಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಡಾ.ಆದಿತ್ಯಗೌಡ, ಕ್ಯಾನ್ಸರ್ ಕಾಯಿಲೆ ಬಗ್ಗೆ ಮಾಹಿತಿ ನೀಡಿ ಪ್ರಾಥಮಿಕ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಬಲಪಡಿಸುವ ನಿಟ್ಟಿನಿಂದ ಸರ್ಕಾರವು ಕೈಗೊಂಡಿರುವ ವಿವಿಧ ಸಂಘ-ಸಂಸ್ಥೆಗಳ, ಬ್ಯಾಂಕ್ ಸಾಲ ಸೌಲಭ್ಯಗಳು, ಸಬ್ಸಿಡಿಗಳ ಬಗ್ಗೆ ಕರ್ನಾಟಕ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ನಾಗರಾಜ ಗೌಡ ಮಾಹಿತಿ ನೀಡಿದರು.

ಹೈನುಗಾರಿಕೆ, ರೇಷ್ಮೆ ಗೂಡಿನ ಹಾರ ತಯಾರಿಕೆ ಹಾಗೂ ಸಾಂಸ್ಕೃತಿಕ ಸಾಧಕರಾದ ವೀಣಾ, ಕಾಮಾಕ್ಷಿ ಮತ್ತು ಶಾಂತಮ್ಮ ಅವರನ್ನು ಸನ್ಮಾನಿಸಲಾಯಿತು. ಮೈಕ್ರೋ ಬಚತ್ ಮತ್ತು ಆರೋಗ್ಯ ಕಾರ್ಯಕ್ರಮದಡಿ ಮಂಜೂರಾದ ಮೊತ್ತದ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ರಂಗೋಲಿ ಹಾಗೂ ಪುಷ್ಪಗುಚ್ಛ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಹಾಯಕ ಪ್ರಾಧ್ಯಾಪಕಿ ಶ್ರೀಲತಾ, ತಾಲೂಕು ಯೋಜನಾಧಿಕಾರಿ ಎಂ.ಎ.ಹಾಲಪ್ಪ, ಜನ ಜಾಗೃತಿ ಸದಸ್ಯರಾದ ನಿಂಗೇಗೌಡ, ಗುರುಸ್ವಾಮಿ, ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸದಸ್ಯರು ಭಾಗವಹಿಸಿದ್ದರು.