ಮೈಸೂರು: ಹೆಣ್ಣು ಸರ್ವ ಶಕ್ತಿ ಸ್ವರೂಪಿಣಿಯಾಗಿದ್ದು, ಒಂದಲ್ಲ ಒಂದು ರೀತಿಯಲ್ಲಿ ಸರ್ವ ಕ್ಷೇತ್ರಗಳಲ್ಲೂ ಹೆಣ್ಣಿನ ಪಾತ್ರ ಇದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಹಯೋಗದಲ್ಲಿ ನಗರದ ನ್ಯೂ ಸಯ್ಯಜಿರಾವ್ ರಸ್ತೆಯ ಧರ್ಮಪ್ರಕಾಶ ರಾವ್ ಬಹದ್ದೂರ್ ಡಿ.ಬನುಮಯ್ಯ ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಿಂಗ ತಾರತಮ್ಯಮುಕ್ತವಾದ ಸಮಾಜ ನಿರ್ಮಿಸಲು, ಮಹಿಳೆಯರ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಸಾಂಸ್ಕೃತಿಕ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಸ್ಮರಿಸಿ ಗೌರವಿಸಲು 1975ರಿಂದ ಪ್ರತಿವರ್ಷ ಮಾ.8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದ್ದು, ಈ ದಿನವನ್ನು ಸಮಸ್ತ ಮಹಿಳೆಯರ ಗೌರವಾರ್ಥ ಅರ್ಪಿಸಲಾಗುತ್ತಿದೆ ಎಂದರು.
ಜಗದಲ್ಲಿ ಬೇಕಾದಷ್ಟು ಜನ ಸಾಧಕರಿರಬಹುದು. ಅನೇಕರು ಸಾಧನೆಗಳನ್ನು ಮಾಡಿ ಅವರು ಜಗತ್ತಿನಲ್ಲಿ ಶಾಶ್ವತವಾಗಿ ಉಳಿದು ಭೌತಿಕವಾಗಿ ಅಳಿದು ಹೋಗಿರಬಹುದು. ಆದರೆ ಅವರ ಜತೆಗೆ ಸ್ತ್ರೀ ಶಕ್ತಿಯ ಪ್ರಭಾವ ಜಗತ್ತಿನಲ್ಲಿ ಅಮರವಾದುದು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಲೇಖನ ಸಾಮಗ್ರಿ ವಿತರಿಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ಶಿಕ್ಷಕಿಯರಾದ ಕೆ.ಎಂ.ಮಂಗಳಾ, ಗೌರಮ್ಮ ಮತ್ತು ಉಷಾ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಮುಖ್ಯ ಶಿಕ್ಷಕ ಎಚ್.ಎಸ್. ತಿಪ್ಪೇಸ್ವಾಮಿ, ಶಿಕ್ಷಕರಾದ ಶ್ರೀನಿವಾಸ ಮೂರ್ತಿ, ಎಚ್. ಪಿ.ಹರೀಶ್ ಹಾಗೂ ದಿವ್ಯಾ ಉಪಸ್ಥಿತರಿದ್ದರು.