ಜಿಲ್ಲೆ

ಸರ್ಕಾರಿ ಹೊರಗುತ್ತಿಗೆ ನೌಕರರು ಒಗ್ಗಟ್ಟಾಗಿ

ಚಾಮರಾಜನಗರ: ಜಿಲ್ಲೆಯಲ್ಲಿರುವ ಸರ್ಕಾರಿ ಹೊರಗುತ್ತಿಗೆ ನೌಕರರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಬೇಕಿದೆ ಎಂದು ಸರ್ಕಾರಿ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಕರೆ ನೀಡಿದರು.

ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಜಿಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಘದ ಸರ್ವಸದಸ್ಯರ ಸಭೆಯನ್ನ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿರುವ ಹೊರಗುತ್ತಿಗೆ ನೌಕರರು ವೇತನದಲ್ಲಿ ಉಂಟಾಗುವ ಸಮಸ್ಯೆಗಳನ್ನ ನಿವಾರಿಸಲು ಬೀದರ್, ಉಡುಪಿಯಲ್ಲಿ ಮಾಡಿರುವಂತೆ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕ ಇಲಾಖೆಯಿಂದ ಅಧಿಕಾರಿಗಳನ್ನೊಳಗೊಂಡ ಕಾರ್ಮಿಕರ ಸಹಕಾರ ಸಂಘ ಸ್ಥಾಪಿಸಬೇಕು. ಈ ಮೂಲಕ ಜಿಲ್ಲೆಯ ಹೊರಗುತ್ತಿಗೆ ಸಿಬ್ಬಂದಿಗಳ ಸರ್ವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಸಂಘದ ಸದಸ್ಯತ್ವಕ್ಕಾಗಿ ಜಿಲ್ಲೆಯಾದ್ಯಂತ ಅಭಿಯಾನ ಹಮ್ಮಿಕೊಂಡು, ಸದಸ್ಯತ್ವ ಹೆಚ್ಚಳ ಮಾಡಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಸಮಿತಿಯನ್ನ ರಚಿಸಲಾಯಿತು. ಚಾಮರಾಜನಗರ ತಾಲೂಕು ಅಧ್ಯಕ್ಷರಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಡಿ ಗ್ರ್ೂ ನೌಕರ ಕುಮಾರ್, ಉಪಾಧ್ಯಕ್ಷರಾಗಿ ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಸಿ.ನಾಗೇಂದ್ರ, ಕಾರ್ಯದರ್ಶಿಯಾಗಿ ಜಿಲ್ಲಾ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ಬಿ.ವಿದ್ಯಾ ಅವರನ್ನು ಆಯ್ಕೆ ಮಾಡಲಾಯಿತು. ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾಗಿ ಬಿಸಿಎಂ ಇಲಾಖೆಯ ರಮೇಶ್, ಉಪಾಧ್ಯಕ್ಷ ಸರ್ವೇ ಸಹಾಯಕ ಬಸವಣ್ಣ, ಕಾರ್ಯದರ್ಶಿಯಾಗಿ ಆರೋಗ್ಯ ಇಲಾಖೆಯ ಬಿ.ಲೋಕೇಶ್ ಅವರನ್ನು ಆಯ್ಕೆ ಮಾಡಲಾಯಿತು. ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾಗಿ ಸರ್ವೇ ಸಹಾಯಕ ಮಹದೇವಯ್ಯ, ಉಪಾಧ್ಯಕ್ಷರಾಗಿ ಪಿಡಬ್ಲ್ಯೂಡಿ ವಾಹನ ಚಾಲಕ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.

ಯಳಂದೂರು ತಾಲೂಕು ಅಧ್ಯಕ್ಷರಾಗಿ ಕುಮಾರ್, ಉಪಾಧ್ಯಕ್ಷ ಸರ್ವೆ ಸಹಾಯಕ ರಾಜೇಶ್ ಹಾಗೂ ಹನೂರು ತಾಲೂಕು ಅಧ್ಯಕ್ಷರಾಗಿ ಮೋಹನ್‌ರಾಜ್, ಉಪಾಧ್ಯಕ್ಷರಾಗಿ ಪುಟ್ಟಸ್ವಾಮಿ, ಕಾರ್ಯದರ್ಶಿ ಸಿದ್ದೇಶ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸರ್ಕಾರಿ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಶಿವದೇವ್, ಖಜಾಂಚಿ ಎಂ.ರಾಜಪ್ಪ, ಸಹ ಖಜಾಂಚಿ ಬಿ.ಮಾದೇಶ್ ಅಮಚವಾಡಿ, ಜಂಟಿ ಕಾರ್ಯದರ್ಶಿ ಬಿ.ಕಾರ್ತಿಕ್, ನಂಜುಂಡಸ್ವಾಮಿ, ನವೀನ್ , ಶಬರೀಶ್, ಮಹೇಶ್, ಜಿ.ಚೇತನ್ ಹಾಗೂ ಇತರರು ಹಾಜರಿದ್ದರು.