ಗದಗ: ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೊನಾ ಕಂಟಕ ಎದುರಾಗಿದೆ. ಗುರುವಾರ ಹೆರಿಗೆ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದ 9 ತಿಂಗಳ ಗರ್ಭಿಣಿಯೊಬ್ಬರಿಗೆ ಕರೊನಾ ಸೋಂಕು ತಗುಲಿದ್ದು, ಇದರಿಂದ ಆಸ್ಪತ್ರೆ ಸಿಬ್ಬಂದಿ ಕಂಗಾಲಾಗಿದ್ದಾರೆ. ಆಸ್ಪತ್ರೆ ಸುತ್ತಮುತ್ತಲಿನ ಮನೆಗಳ ಜನರು ಭಯಭೀತರಾಗಿದ್ದಾರೆ.
ಈ ಮಹಿಳೆಗೆ ತಪಾಸಣೆ ಮಾಡಿದ ವೈದ್ಯರು, ನರ್ಸ್ಗಳು ಮತ್ತು ಇತರ 15ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕಿನ ಭಯ ಆವರಿಸಿದೆ. ಕರೊನಾ ಸೋಂಕಿತೆ ಆಸ್ಪತ್ರೆಗೆ ಬಂದು ಹೋಗಿದ್ದಾರೆ ಎಂಬ ವಿಷಯ ತಿಳಿದ ಮೇಲೆ ಆಸ್ಪತ್ರೆ ಕಡೆಗೆ ಯಾರೂ ಬರುತ್ತಿಲ್ಲ. ಜತೆಗೆ ಇಂದು ಇದೇ ಆಸ್ಪತ್ರೆಗೆ ತಪಾಸಣೆಗೆ ಆಗಮಿಸಿದ್ದ ಹತ್ತಾರು ಗರ್ಭಿಣಿಯರು ತಪಾಸಣೆ ಮಾಡಿಸಿಕೊಳ್ಳದೆ ಮರಳಿದ್ದಾರೆ. ಇಡೀ ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಗೂ ಗುರುವಾರ ಈ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದ ಅನೇಕ ಗರ್ಭಿಣಿಯರಿಗೆ ಕರೊನಾ ಸೋಂಕಿನ ಭಯ ಉಂಟಾಗಿದೆ.
ಕೋವಿಡ್ ಆಸ್ಪತ್ರೆಗೆ ಚಿಂತನೆ: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚಾಗತೊಡಗಿದ್ದರಿಂದ ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ನಗರದ ಮಧ್ಯಭಾಗದಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆ 200 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಸಕಲ ಸೌಲಭ್ಯ ಇಲ್ಲಿದೆ. ಮುಖ್ಯವಾಗಿ ಕೆ.ಸಿ. ರಾಣಿ ರಸ್ತೆಯು ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದ್ದು, ಹಲವು ಖಾಸಗಿ ಆಸ್ಪತ್ರೆಗಳು ಈ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಈ ಪ್ರದೇಶದಲ್ಲಿ ಕೋವಿಡ್-19 ಆಸ್ಪತ್ರೆಯನ್ನು ಆರಂಭಿಸಲು ಜಿಲ್ಲಾಡಳಿತ ಹೊರಟಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಮತ್ತೆ 19 ಜನರಿಗೆ ಸೋಂಕು
ಗದಗ: ಜಿಲ್ಲೆಯಲ್ಲಿ ಶುಕ್ರವಾರ 19 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಗದಗ ನಗರದ ಸಿದ್ದರಾಮೇಶ್ವರ ನಗರ ನಿವಾಸಿ 31 ವರ್ಷದ ಸೋಂಕಿತ ಪುರುಷನ ಸಂಪರ್ಕದಿಂದ ಅದೇ ಪ್ರದೇಶದ 31 ವರ್ಷದ ಪುರುಷ ಹಾಗೂ 24 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.
ಗುಜರಾತ್ ರಾಜ್ಯದಿಂದ ಜುಲೈ 2ರಂದು ಜಿಲ್ಲೆಗೆ ಆಗಮಿಸಿದ್ದ ಗದಗ ತಾಲೂಕಿನ ಮಲ್ಲಸಮುದ್ರದ 19 ವರ್ಷದ ಯುವಕ, ಮಹಾರಾಷ್ಟ್ರ ದಿಂದ ಜೂನ್ 30ರಂದು ನಗರಕ್ಕೆ ಆಗಮಿಸಿದ್ದ ಕಳಸಾಪುರ ರಿಂಗ್ ರೋಡ್ ಪ್ರದೇಶದ 33 ವರ್ಷದ ಪುರುಷ ಹಾಗೂ ಹಾವೇರಿ ಜಿಲ್ಲೆಯಿಂದ ಜೂನ್ 26 ರಂದು ಜಿಲ್ಲೆಗೆ ಆಗಮಿಸಿದ್ದ ಗದಗ-ಬೆಟಗೇರಿಯ ನರಸಾಪುರದ ರಂಗಪ್ಪಜ್ಜ ಮಠದ ಹತ್ತಿರದ ನಿವಾಸಿ, 60 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಮಲ್ಲಸಮುದ್ರದ ಅಂಜುಮನ್ ಕಾಲೇಜ್ ಹತ್ತಿರದ ನಿವಾಸಿ, 31 ವರ್ಷದ ಪುರುಷ, ಗದಗ ನಗರದ ಕಾಗದಗೆರೆ ನಿವಾಸಿ, 60 ವರ್ಷದ ಮಹಿಳೆ ಹಾಗೂ ಹರ್ತಿ ಗ್ರಾಮದ ಈರಣ್ಣ ದೇವಸ್ಥಾನ ಹತ್ತಿರದ ನಿವಾಸಿ 22 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.ತಾಲೂಕಿನ ಬೆಳದಡಿ ಗ್ರಾಮದ ಶಾಲೆಯ ಹಿಂಭಾಗದ ನಿವಾಸಿ 40 ವರ್ಷದ ಪುರುಷ, ಅಡವಿ ಸೋಮಾಪುರ ತಾಂಡಾ ನಿವಾಸಿ 60 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.
ನರಗುಂದ ಪಟ್ಟಣದ ಗಡಿ ಓಣಿ ನಿವಾಸಿ 39 ವರ್ಷದ ಸೋಂಕಿತ ಪುರುಷನ ಸಂಪರ್ಕದಿಂದ ಅದೇ ಪ್ರದೇಶದ 7 ವರ್ಷದ ಬಾಲಕಿ, 65 ವರ್ಷದ ಮಹಿಳೆ, 36 ವರ್ಷದ ಮಹಿಳೆ, 15 ವರ್ಷದ ಯುವಕ, 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಧಾರವಾಡ ಜಿಲ್ಲೆಯಿಂದ ಜೂನ್ 30ರಂದು ಆಗಮಿಸಿದ್ದ ನರಗುಂದ ಗುಡ್ಡದಕೇರಿ ಅಂಬಾಭವಾನಿ ದೇವಸ್ಥಾನದ ಹತ್ತಿರದ ನಿವಾಸಿ 25 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಜಿಮ್್ಸ ಆಸ್ಪತ್ರೆಗೆ ದಾಖಲಾಗಿರುವ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಡ್ನೂರು ಗ್ರಾಮದ 31 ವರ್ಷದ ಪುರುಷನಿಗೆ ಇನ್ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಸೋಂಕು ದೃಢವಾಗಿದೆ.ಲಕ್ಷ್ಮೇಶ್ವರದ 39 ವರ್ಷದ ಸೋಂಕಿತನ ಪುರುಷನ ಸಂಪರ್ಕದಿಂದಾಗಿ ಲಕ್ಷ್ಮೇಶ್ವರದ ಹೊಸ ಬಸ್ ನಿಲ್ದಾಣದ ಹತ್ತಿರದ ಇಂದಿರಾ ನಗರ ನಿವಾಸಿ 40 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಲಕ್ಷೆ್ಮೕಶ್ವರ ತಾಲೂಕಿನ ಗೊಜನೂರು ಗ್ರಾಮದ 23 ವರ್ಷದ ಮಹಿಳೆಗೆ ಸೋಂಕು ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.