ಜಿಲ್ಲೆ

ಸರ್ಕಾರಿ ಸ್ಥಳ ಒತ್ತುವರಿ ಕಾವೇರಿದ ಚರ್ಚೆ

ಆಳಂದ: ಸ್ಥಳ ಒತ್ತುವರಿ ಕುರಿತು ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದ ಪ್ರಸಂಗ ಮಾದನಹಿಪ್ಪರಗಾ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸೋಮವಾರ ನಡೆಯಿತು.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಪಿಡಿಒ ಸುಕನ್ಯಾ ಮಾತನಾಡಿ, ಹೊಸ ಗ್ರಾಮ ಪಂಚಾಯಿತಿ ಹಾಗೂ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಕೆಲ ಸದಸ್ಯರು ಮಾತನಾಡಿ, ಗ್ರಾಮ ಸೇವಕರ ವಸತಿ ನಿಲಯಗಳನ್ನು ನೆಲಸಮ ಮಾಡಲಾಗಿದ್ದು, ಅಲ್ಲಿಯೇ ಗ್ರಂಥಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಕೆಲವರು ಮಾತನಾಡಿ, ಆ ಸ್ಥಳವನ್ನು ಪಂಚಾಯಿತಿ ಸದಸ್ಯರು ಒತ್ತುವರಿ ಮಾಡಿದ್ದಾರೆ ಎಂದರು. ಇದರಿಂದ ಗದ್ದಲ ಶುರುವಾಯಿತು. ಹಿಂದಿನ ಅಧ್ಯಕ್ಷರು, ಸದಸ್ಯರು ಗ್ರಾಮದೆಲ್ಲೆಡೆ ಸ್ಥಳ ಒತ್ತುವರಿ ಮಾಡಿಕೊಂಡಿದ್ದಾರೆ. ಮೊದಲು ಅವರ ಜಾಗ ಖಾಲಿ ಮಾಡಿಸಿ, ಬಳಿಕ ನಾವು ಸ್ಥಳವನ್ನು ಬಿಡುತ್ತೇವೆ ಎಂದು ಸ್ಥಳ ಒತ್ತುವರಿ ಮಾಡಿದ ಸದಸ್ಯರು ಹೇಳಿದರು. ಇದರಿಂದ ಕೆಲ ಕಾಲ ಪರ- ವಿರೋಧ ಗಲಾಟೆ ನಡೆಯಿತು.

ಬಳಿಕ ಪಿಡಿಒ ಮಧ್ಯ ಪ್ರವೇಶಿಸಿ, ದಶಕದ ಹಿಂದೆ ಜಿಲ್ಲಾ ಕೇಂದ್ರವೂ ಗ್ರಂಥಾಲಯದ ಹೆಸರಿಗೆ ಜಾಗವೊಂದನ್ನು ಬರೆದು ಕೊಡಲಾಗಿತ್ತು. ಆ ಜಾಗವನ್ನು ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿದ್ದು, ತೆರವು ಮಾಡಿ ಲೈಬ್ರರಿ ನಿರ್ಮಿಸಲಾಗುವುದು. ಇನ್ನು ಮಾರುಕಟ್ಟೆ ಹೆಸರಿನಲ್ಲಿಯೂ ಸ್ಥಳವಿದ್ದು, ಅಲ್ಲಿಯೇ ಮಾರ್ಕೆಟ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮ ಪಂಚಾಯಿತಿಯ ವಾಣಿಜ್ಯ ಮಳಿಗೆಯಿಂದ ಬಾಡಿಗೆ ಬರುತ್ತಿಲ್ಲ. ಕೆಲ ಮಾಲೀಕರು ಒಪ್ಪಂದದ ಕರಾರು ಮೀರಿ ನಡೆದುಕೊಳ್ಳುತ್ತಿದ್ದಾರೆ. ಅಂತವರಿಗೆ ನೋಟಿಸ್ ಕೊಟ್ಟು, ಮುಲಾಜಿಲ್ಲದೆ ಕಟ್ಟಡದಿಂದ ಹೊರ ಹಾಕಿ ಎಂದು ಸದಸ್ಯರು ಒತ್ತಾಯಿಸಿದರು.

ಅಲ್ಲದೆ ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಸಮಾರಂಭ ಹಾಗೂ ವಸತಿ ಯೋಜನೆ ಬಗ್ಗೆ ಚರ್ಚಿಸಲಾಯಿತು. ಅಧ್ಯಕ್ಷೆ ಸುವರ್ಣಾ ಮೈಂದರಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಿವಲಿಂಗಪ್ಪ ಇಂಗಳೆ, ಸದಸ್ಯರಾದ ಮುಕ್ತುಮ್‌ಸಾಬ್ ಚಪ್ಪು, ಧರ್ಮಣ್ಣ ಕೌಲಗಿ, ಶಂಕರ ಹರಳಯ್ಯ, ಮಲ್ಲಿನಾಥ ಮಾಷಾಳ, ಉಮಾ ಮಾತಂಗಿ, ಮಾನಂದ ಬಾಬುಸಿ, ಮಹಾದೇವಯ್ಯ ಸ್ವಾಮಿ, ಸಿಬ್ಬಂದಿ ಸುರೇಶ ರೂಗಿ, ಮಹೇಶ ಸಿಂಗೆ ಇತರರಿದ್ದರು.