ಹಿರಿಯ ನಾಗರಿಕ ಸೇವಾ ಟ್ರಸ್ಟ್‌ಗೆ ಕಚೇರಿಗೆ ಹಳೇ ಪೊಲೀಸ್ ಠಾಣಾ ಕಟ್ಟಡವನ್ನು ನೀಡುವಂತೆ ಒತ್ತಾಯಿಸಿ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರಿಗೆ ಹಿರಿಯ ನಾಗರಿಕರು ಇತ್ತೀಚೆಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ಸರ್ಕಾರಿ ಸೌಲಭ್ಯಗಳಿಂದ ವಂಚಿತ ಹಿರಿಯ ನಾಗರಿಕರು

ಸೋಮವಾರಪೇಟೆ: ವೃದ್ಧಾಪ್ಯ ಶಾಪವಲ್ಲ ಎಂದು ಹೇಳಿದರೂ ಗ್ರಾಮೀಣ ಭಾಗದಲ್ಲಿ ಹಿರಿಯ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಜೀವನಪರ್ಯಂತ ಸರ್ಕಾರಕ್ಕೆ ತೆರಿಗೆ ಕಟ್ಟಿದ್ದರೂ ವೃದ್ಧಾಪ್ಯದಲ್ಲಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವಂತಹ ದುಸ್ಥಿತಿ ಬಂದಿದೆ ಎಂದು ಹಿರಿಯ ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ.

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಉದ್ಯೋಗದಲ್ಲಿದ್ದು ನಿವೃತ್ತರಾದವರು ಒಂದಷ್ಟು ಸಮಸ್ಯೆಯಿಂದ ಮುಕ್ತರಾಗಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿನ ಬಹುತೇಕ ಹಿರಿಯರು ಸರ್ಕಾರದ 1,200 ರೂ.ಗಳ ವೃದ್ಧಾಪ್ಯ ವೇತನವನ್ನು ನಂಬಿಕೊಂಡು ಬದುಕುವಂತಹ ಪರಿಸ್ಥಿತಿ ಇದೆ. ಆದರೂ ಕೆಲ ಸರ್ಕಾರಿ ಕಚೇರಿಗಳಲ್ಲಿ ಅದಕ್ಕೂ ಲಂಚಕ್ಕಾಗಿ ಬೇಡಿಕೆ ಇಡುತ್ತಾರೆ. ದಾಖಲಾತಿ ಮಾಡಿಕೊಡಲು ವರ್ಷಾನುಗಟ್ಟಲೇ ಅಲೆಸುತ್ತಾರೆ. ಅಂತಹವರಿಗೆ ಹಿರಿಯರ ಶಾಪ ತಟ್ಟದೆ ಬಿಡದು ಎಂದು ಹಿರಿಯ ನಾಗರಿಕರು ಆಕ್ರೋಶ ಹೊರಹಾಕಿದರು.

ಸರ್ಕಾರ ನೀಡುವ 1200 ರೂ. ಮಾತ್ರೆ ಖರ್ಚಿಗೂ ಸಾಕಾಗುವುದಿಲ್ಲ. ಊಟಕ್ಕೆ ಏನೂ ಮಾಡುವುದು? ಕಳೆದ 60, 70 ವರ್ಷ ಸರ್ಕಾರಕ್ಕೆ ತೆರಿಗೆ ಕಟ್ಟಿದ್ದೇವೆ. ಕೊನೆ ಕಾಲದಲ್ಲಿ ಸೌಲಭ್ಯ ಒದಗಿಸಬೇಕು. ವೃದ್ಧಾಪ್ಯ ವೇತನವನ್ನು 5 ಸಾವಿರ ರೂ.ಗೆ ಏರಿಸಬೇಕು ಎಂದು ಹಿರಿಯ ನಾಗರಿಕರು ಮನವಿ ಮಾಡಿದರು.

ಯಾರೂ ಕೇಳೋರಿಲ್ಲ: ಎಷ್ಟೊ ಮಕ್ಕಳಿಗೆ ತಂದೆ, ತಾಯಿ ಹೊರೆಯಾಗಿದ್ದಾರೆ. ಹಿರಿಜೀವಗಳು ಒತ್ತಡದಿಂದ ಬದುಕುವಂತಹ ಪರಿಸ್ಥಿತಿ ಇದೆ. ಶೇ.90 ವೃದ್ಧರು ಮಧುಮೇಹ, ಮಂಡಿನೋವು, ರಕ್ತದೊತ್ತಡ, ಉಬ್ಬಸ, ಅಸಿಡಿಟಿ, ಅಲರ್ಜಿ, ಕೆಮ್ಮು ಹೀಗೆ ನೂರೆಂಟು ರೋಗಗಳಿಗೆ ತುತ್ತಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಅವರನ್ನು ಯಾರೂ ಕೇಳುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಸುಸಜ್ಜಿತ ವೃದ್ಧಾಶ್ರಮ ಸ್ಥಾಪಿಸಬೇಕು. ಹಗಲು ಯೋಗಕ್ಷೇಮ ಕೇಂದ್ರವನ್ನು ತಾಲೂಕಿನಲ್ಲಿ ತೆರೆಯಬೇಕು. ಸರ್ಕಾರದಿಂದ ಗುರುತಿನ ಚೀಟಿ ನೀಡಬೇಕು ಎಂದು ಬೇಡಿಕೆಗಳನ್ನು ಹಿರಿಯ ನಾಗರಿಕರು ಇಟ್ಟರು.
ವಿಶೇಷ ಸೌಲಭ್ಯಗಳಿಲ್ಲ: ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಹಿರಿಯರಿಗೆ ವಿಶೇಷ ಸೌಲಭ್ಯಗಳಿಲ್ಲ. ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಂತೆ ಸರದಿ ಸಾಲಿನಲ್ಲಿ ನಿಂತು, ಚಿಕಿತ್ಸೆ ಪಡೆದುಕೊಳ್ಳುವಂತಹ ದುಸ್ಥಿತಿ ಇದೆ. ಜನರಲ್ಲಿ ಮಾನವೀಯತೆ ಇಲ್ಲದಂತಾಗಿದೆ. ನೇರವಾಗಿ ವೈದ್ಯರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ. ವೈದ್ಯರು ಸಿ.ಸಿ. ಕ್ಯಾಮರಾದಲ್ಲಿ ವೃದ್ಧರು ನಿಂತಿರುವುದನ್ನು ನೋಡಿದರೂ, ಕುರುಡರಾಗುತ್ತಾರೆ. ಒಳಗೆ ಕರೆಯುವುದಿಲ್ಲ ಎಂದು ತಮ್ಮ ನೋವು ತೋಡಿಕೊಂಡರು.

ಹಿರಿಯ ನಾಗರಿಕರಿಗೆ ಮೊದಲ ಆದ್ಯತೆಯಲ್ಲಿ ಕೆಲಸ ಮಾಡಿಕೊಡಲು ನಿಯಮವಿದ್ದರೂ ಲಂಚ ಕೊಡದ ಕಡತಗಳು ಹತ್ತಿಪ್ಪತ್ತು ವರ್ಷಗಳಿಂದ ತಾಲೂಕು ಕಚೇರಿಯಲ್ಲಿ ಕೊಳೆಯುತ್ತಿವೆ. ಹಿರಿಯರಿಗೆ ಮೊದಲ ಆದ್ಯತೆ ಎಂಬುದು ಹಸಿ ಸುಳ್ಳು ಎಂದು ಅಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಇಲಾಖೆಯಲ್ಲಿ ವೃದ್ಧರನ್ನು ನಿತ್ಯ ಅಲೆಸುತ್ತಿದ್ದಾರೆ. ಕೂರಲು ಕುರ್ಚಿ ವ್ಯವ್ಯಸ್ಥೆ ಇಲ್ಲ. ಶೌಚಗೃಹವಿಲ್ಲ. ಎಷ್ಟೋ ವೃದ್ಧರು ಉಪವಾಸವಿದ್ದು ಸಂಜೆವರೆಗೆ ಕಾಯುವಂತಹ ಪರಿಸ್ಥಿತಿ ಇದೆ. ಹಿರಿಯ ನಾಗರಿಕರು ಅರ್ಜಿ ಕೊಟ್ಟ ನಂತರ ದಾಖಲಾತಿಗಳನ್ನು ಮನೆಗೆ ತಲುಪಿಸುವಂತಾಗಬೇಕು. ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಚಿತ ಪ್ರಯಾಣಕ್ಕೆ ಅವಕಾಶ ಕೊಡಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶೇ. 25ರಷ್ಟು ರಿಯಾಯಿತಿ ಇದೆ. ಮಹಿಳೆಯರಿಗೆ ನೀಡಿದ ಸೌಲಭ್ಯದಂತೆ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣಕ್ಕೆ ಕೂಡಲೇ ಸರ್ಕಾರ ಆದೇಶ ಹೊರಡಿಸಬೇಕು. ಖಾಸಗಿ ಬಸ್‌ಗಳಲ್ಲೂ ಶೇ.50 ರಷ್ಟು ರಿಯಾಯಿತಿ ಕೊಡಬೇಕು. ಹಿರಿಯ ನಾಗರಿಕರಿಗೆ ಸೌಲಭ್ಯ ಕೊಡುವುದು ಸಮಾಜ ಸೇವೆ ಎಂದೇ ಪರಿಗಣಿಸಬೇಕು.

60 ವರ್ಷ ಕಳೆದ ಮೇಲೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಕೊಡುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಹಿರಿಯ ನಾಗರಿಕರು ಮನೆಯಿಂದ ಹೊರಗೆ ಬಂದ ಮೇಲೆ ಎಲ್ಲ ರೀತಿಯಲ್ಲಿ ಅವಮಾನವನ್ನು ಅನುಭವಿಸಬೇಕಾದಂತಹ ಸಂದರ್ಭ ಇದೆ. ಇನ್ನಾದರೂ ಸರ್ಕಾರ ಎಲ್ಲ ಸೌಲಭ್ಯಗಳು ಉಚಿತವಾಗಿಯೇ ಸಿಗುವಂತೆ ಕಾನೂನು ರೂಪಿಸಬೇಕು ಎಂಬುದು ಹಿರಿಯ ನಾಗರಿಕರ ಒಕ್ಕೊರಲ ಒತ್ತಾಯವಾಗಿದೆ.

ಜನಪ್ರತಿನಿಧಿಗಳು, ಜಿಲ್ಲಾಡಳಿತ ಸ್ಪಂದಿಸಿಲ್ಲ
ಹಿರಿಯ ನಾಗರಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಕೊಡಿಸುವ ಉದ್ದೇಶದಿಂದ ಹಿರಿಯ ನಾಗರಿಕರ ಸೇವಾ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಹಿರಿಯ ನಾಗರಿಕರ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ, ಪ್ರತಿಯೊಂದು ಕೆಲಸಗಳು ಪ್ರಥಮ ಆದ್ಯತೆ ನೀಡಿ ಮಾಡಿಕೊಡಬೇಕು. ವಿಳಂಬ ಮಾಡಬಾರದು ಎಂದು ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಈಗಲೂ ಹಿರಿಯ ನಾಗರಿಕರು ತಾಲೂಕು ಕಚೇರಿಗೆ ನಿತ್ಯ ಸುತ್ತಬೇಕಿದೆ. ಹಿರಿಯ ನಾಗರಿಕರ ಸೇವಾ ಸಂಸ್ಥೆ ಕಚೇರಿಗೆ ಹಳೇ ಪೊಲೀಸ್ ಠಾಣಾ ಕಟ್ಟಡವನ್ನು ಕೇಳಿದ್ದೇವೆ. ಅದು ಪಾಳು ಬಿದ್ದಿದ್ದರೂ ಕೊಡುತ್ತಿಲ್ಲ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಇದುವರೆಗೆ ಸ್ಪಂದಿಸಿಲ್ಲ. ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ.
ಸಿ.ಕೆ. ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ, ಹಿರಿಯ ನಾಗರಿಕರ ಸೇವಾ ಟ್ರಸ್ಟ್

ಕೆಲಸ ಮಾಡಿಕೊಡಲು ಅಲೆಸಬೇಡಿ
ಹಿರಿಯ ನಾಗರಿಕರಿಗೆ ಸರ್ಕಾರಿ ಕಚೇರಿಯಲ್ಲಿ ನೌಕರರು ಮೊದಲು ಗೌರವ ಕೊಡಬೇಕು. ಕೆಲಸ ಮಾಡಿಕೊಡಲು ಅಲೆಸಬಾರದು. ಅರ್ಜಿ ಕೊಟ್ಟ ನಂತರ ಮನೆಗೆ ದಾಖಲಾತಿಗಳನ್ನು ತಲುಪಿಸಬೇಕು. ಲಂಚಕ್ಕೆ ಬೇಡಿಕೆ ಇಡಬಾರದು. 70 ವರ್ಷದ ವ್ಯಕ್ತಿಯೊಬ್ಬರು ಆಸ್ತಿ ದುರಸ್ತಿಗೆ 30 ವರ್ಷದಿಂದ ಅಲೆಯುತ್ತಿದ್ದಾರೆ. ಈ ಬಗ್ಗೆ ರೈತ ಸಂಘಕ್ಕೆ ದೂರು ಬಂದಿದೆ. ಕಂದಾಯ ಇಲಾಖೆಯಲ್ಲಿನ ಭ್ರಷ್ಟರನ್ನು ಓಡಿಸದಿದ್ದರೆ ಬಡವರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.
ಎಸ್.ಬಿ. ರಾಜಪ್ಪ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಕೃಷಿಕ, ತಲ್ತಾರೆಶೆಟ್ಟಳ್ಳಿ

ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿ ನೀಡಿ
ಹಿರಿಯ ನಾಗರಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು. ಇಲಾಖೆಯಲ್ಲಿ ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿರಬೇಕು. ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಕೊಡಬೇಕು. ಕಂದಾಯ ಇಲಾಖೆಯಲ್ಲಿ ಹಿರಿಯರು ಕೇಳಿದ ಮೂಲ ದಾಖಲೆಗಳನ್ನು ಮನೆಗಳಿಗೆ ತಲುಪಿಸಬೇಕು. ಕೊಟ್ಟ ಅರ್ಜಿಗಳಿಗೆ ಮೊದಲ ಆದ್ಯತೆಯೊಂದಿಗೆ ವಿಲೇವಾರಿ ಮಾಡಬೇಕು.
ಬಿ.ಎಸ್. ಅನಂತರಾಮು, ಹಿರಿಯ ನಾಗರಿಕ, ಅಶೋಕ ರಸ್ತೆ, ಸೋಮವಾರಪೇಟೆ

ವಿಶ್ರಾಂತಿ ಕೊಠಡಿ ಸೌಲಭ್ಯ ಒದಗಿಸಿ
ಸರ್ಕಾರಿ ಕಚೇರಿಗಳಲ್ಲಿ ಹಿರಿಯ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ಪ್ರತ್ಯೇಕ ಆಸನಗಳು, ಶೌಚಗೃಹ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ಸೌಲಭ್ಯ ಒದಗಿಸಬೇಕು. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಹಿರಿಯ ನಾಗರಿಕರು ದೈಹಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
ಎಂ.ಪಿ. ಮಂದಣ್ಣ, ಹಿರಿಯ ನಾಗರಿಕ, ಕಿಬ್ಬೆಟ್ಟ ಗ್ರಾಮ