ಜಿಲ್ಲೆ

ಸರ್ಕಾರಿ ಸೌಲಭ್ಯ ಸದುಪಯೋಗ ಮಾಡಿಕೊಳ್ಳಿ

ಮುಂಡಗೋಡ: ತಾಲೂಕಿನ 15 ಜನ ಫಲಾನುಭವಿಗಳಿಗೆ ಮೀನುಗಾರಿಕೆಗೆ ಬೇಕಾದ ಸವಲತ್ತುಗಳನ್ನು ಮೀನುಗಾರಿಕೆ ಇಲಾಖೆಯಿಂದ ನೀಡಲಾಗುತ್ತಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಟೌನ್​ಹಾಲ್ ಆವರಣದಲ್ಲಿ ಮೀನುಗಾರಿಕೆ ಇಲಾಖೆಯಿಂದ ಉಚಿತವಾಗಿ ನೀಡುವ ಮೀನಿನ ಬಲೆಗಳನ್ನು ಮೀನುಗಾರರಿಗೆ ಭಾನುವಾರ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು. ಕರೊನಾದಿಂದ ಪ್ರತಿಯೊಬ್ಬರೂ ಸಂಖಕಷ್ಟ ಅನುಭವಿಸುತ್ತಿದ್ದಾರೆ. ಆ ಕಾರಣದಿಂದ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ. ರೇಷನ್ ಕಿಟ್​ಗಳನ್ನು ಕಾರ್ಯಕರ್ತರು ಪಕ್ಷಾತೀತವಾಗಿ ವಿತರಿಸುವ ಕೆಲಸ ಮಾಡಿದ್ದಾರೆ. ಇದೊಂದು ಪುಣ್ಯದ ಕೆಲಸ ಎಂದರು.

ಪಟ್ಟಣದ ಹಳೂರ ಓಣಿ, ಟೌನ್​ಹಾಲ್, ಲಮಾಣಿ ತಾಂಡಾ ಮತ್ತು ಗಾಂಧಿ ನಗರಗಳಲ್ಲಿ ರೇಷನ್ ಕಿಟ್​ಗಳನ್ನು ವಿತರಿಸಲಾಯಿತು.

ಈ ವೇಳೆ ಜಿಪಂ ಸದಸ್ಯ ಎಲ್.ಟಿ. ಪಾಟೀಲ, ರವಿಗೌಡ ಪಾಟೀಲ, ಪಪಂ ಉಪಾಧ್ಯಕ್ಷ ಮಂಜುನಾಥ ಹರಮಲಕರ, ಉಮೇಶ ಬಿಜಾಪುರ, ತುಕಾರಾಮ ಇಂಗಳೆ, ನಾಗಭೂಷಣ ಹಾವಣಗಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೈಭವ ಜಿ.ಎಸ್., ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ರಫೀಕ್ ಇನಾಂದಾರ, ಅಲ್ಲಿಖಾನ್ ಪಠಾಣ, ಗಣೇಶ ಶಿರಾಲಿ, ಗುರುರಾಜ ಕಾಮತ, ಭರತರಾಜ ಹದಳಗಿ ಇತರರಿದ್ದರು. ಪಪಂ ಸದಸ್ಯೆ ರಾಜೇಶ್ವರಿ ಅಂಡಗಿ ನಿರೂಪಿಸಿದರು.