ನೆಲಮಂಗಲ: ಪರಿಶಿಷ್ಟ ಜಾತಿ, ಪಂಗಡದ ಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಸರ್ಕಾರಿ ಜಾಗ ಒತ್ತುವರಿ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗುವುದು. ತಾಲೂಕಿನ ಬಾವಿಕೆರೆ ಗ್ರಾಮದ 2.41 ಎಕರೆ ಜಾಗದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಆಶ್ರಯ ಯೋಜನೆಯಡಿ ನಿವೇಶನಕ್ಕೆ ಮೀಸಲಿಸಿದ್ದು, 15 ದಿನದೊಳಗಾಗಿ ಒತ್ತುವರಿ ತೆರವುಗೊಳಿಸಬೇಕು. ನಗರದ ವಿವಿಧೆಡೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಪೊಲೀಸರೊಂದಿಗೆ ಚರ್ಚಿಸಿ, ಅನ್ಯಾಯದ ವಿರುದ್ಧ ಹೋರಾಟ ಮಾಡುವ ಎಸ್‌ಸಿ, ಎಸ್‌ಟಿ ಸಮುದಾಯದ ಮುಖಂಡರ ಹೆಸರನ್ನು ರೌಡಿಪಟ್ಟಿಯಿಂದ ಕೈಬಿಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿಗೆ ಕರೆ: ಸಭೆ ನಡುವೆಯೇ ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ಗೆ ಕರೆ ಮಾಡಿದ ಶಾಸಕರು, ತಾಲೂಕಿನಾದ್ಯಂದ ಕೆಲ ಸರ್ಕಾರಿ ಜಾಗ ಒತ್ತುವರಿ ಕುರಿತಂತೆ ಚರ್ಚಿಸಿದರು. ಬಳಿಕ ನಗರದ ಸರ್ವೇ ನಂ.246 ಬಂಡಿಮಾರ್ಗ ಜಮೀನಿನಲ್ಲಿ ಡಾ.ಬಾಬು ಜಗಜೀವನರಾಮ್ ಭವನ, ನಗರದ ಸರ್ವೇ 8/3ಕ್ಕೆ ಸಂಬಂಧಿದ್ದ 30 ಎಕರೆ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ಸೇರಿ ವಿವಿಧ ವಿಷಯಗಳನ್ನು 2022ರ ಜನವರಿ 3ರಂದು ಜಿಲ್ಲಾಧಿಕಾರಿಗಳೊಂದಿಗೆ ವಿಶೇಷ ಕುಂದುಕೊರತೆ ಹಮ್ಮಿಕೊಳ್ಳುವುದಾಗಿ ಶಾಸಕರು ತಿಳಿಸಿದರು.
ಜನಜಾಗೃತಿ ಅಭಿಯಾನ: ತಾಲೂಕಿನ ಗೊಲ್ಲಹಳ್ಳಿ, ಬಾವಿಕೆರೆ, ಚಿಕ್ಕಮಾರನಹಳ್ಳಿ, ಹೊನ್ನೇನಹಳ್ಳಿ ಸೇರಿ ವಿವಿಧ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಆರೋಪವಿದ್ದು, ಅಬಕಾರಿ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಮುಂದಿನ ದಿನಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಗ್ರಾಮಕ್ಕೆ ತಹಸೀಲ್ದಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ತೆರಳಿ ಅರಿವು ಮೂಡಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಆರೋಪ: ನಗರದ ಕಂದಾಯ ಇಲಾಖೆ ವ್ಯಾಪ್ತಿಯ 1.2 ಎಕರೆ ಜಾಗಕ್ಕೆ ಅಧಿಕಾರಿಗಳೇ ಸುಳ್ಳುದಾಖಲೆ ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಆಸ್ತಿ ಲಪಟಾಯಿಸಲು ಹುನ್ನಾರ ನಡೆಸಿದ್ದಾರೆ. ತಾಲೂಕಿನ ಜ್ವಲಂತ ಸಮಸ್ಯೆ ಬಗ್ಗೆ 10 ವರ್ಷದಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗೆಯೇ ಸಭೆಗಳಲ್ಲಿ ಚರ್ಚೆಯಾಗುವ ವಿಚಾರಗಳಿಗೆ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್ ಪ್ರಸಾದ್ ಆರೋಪಿಸಿದರು.
ದಲಿತ ಕೂಲಿಕಾರ್ಮಿಕರ ಸಂಘಟ ಅಧ್ಯಕ್ಷ ಬಿ.ಎಂ.ಗಂಗಬೈಲಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ನರಸಿಂಹಮೂರ್ತಿ, ಮುಖಂಡ ನಾರಾಯಣಮೂರ್ತಿ ಇದಕ್ಕೆ ಧ್ವನಿಗೂಡಿಸಿದರು.
ತಾಲೂಕು ಪಂಚಾಯಿತಿ ಇಒ ಮೋಹನ್‌ಕುಮಾರ್, ಶಿರಸ್ತೇದಾರ್ ಶ್ರೀನಿವಾಸ್, ನಗರಸಭೆ ಪೌರಾಯುಕ್ತ ಮಂಜುನಾಥ್, ಬಿಇಒ ಕೆ.ಸಿ.ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಅಂಜನಮೂರ್ತಿ, ಪರಿಶಿಷ್ಟ ಜಾತಿ, ಪಂಗಡದ ಮುಖಂಡರಾದ ರಾಜು ನಿಡವಂದ, ಬೊಮ್ಮನಹಳ್ಳಿ ನಾಗರಾಜು, ಕನಕರಾಜು, ಮುನಿರಾಜು, ರಾಮಾಂಜಿನಪ್ಪ, ಹನುಮಂತರಾಯಪ್ಪ, ಗಂಗಾಧರ್, ಗಂಗಮ್ಮ, ನಾಗರತ್ನಮ್ಮ, ಹನುಮಂತಮ್ಮ ಮತ್ತಿತರರು ಉಪಸ್ಥಿತರಿದ್ದರು.