ಅಭಿಲಾಷ್ ತಿಟ್ಟವಾರನಹಳ್ಳಿ ಚನ್ನಪಟ್ಟಣ
ಸರ್ಕಾರಗಳು ಹಳ್ಳಿಗಳ ಅಭಿವೃದ್ಧಿ ಬಗ್ಗೆ ಹೇಳುತ್ತಿದ್ದರೂ ಅದು ಮಾತಿಗೆ ಸೀಮಿತ ಎನಿಸಿದೆ. ಬಜೆಟ್‌ನಲ್ಲಿ ಕೋಟ್ಯಂತರ ಅನುದಾನ ಘೋಷಣೆಯಾಗುತ್ತಿದ್ದರೂ ಕೆಳಹಂತದಲ್ಲಿ ಅದರ ಅನುಷ್ಠಾನ ಅಷ್ಟಕಷ್ಟೇ. ಹೀಗೆ ಇನ್ನೂ ಹಲವು ಸಮಸ್ಯೆಗಳು ಗ್ರಾಮಗಳನ್ನು ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ವಿಜಯವಾಣಿ ‘ಗ್ರಾಮ ಸಂಚಾರ’ ಕಾರ್ಯಕ್ರಮ ಆರಂಭಿಸಿದೆ. ನಮ್ಮ ವರದಿಗಾರರು ಪ್ರತಿ ತಾಲೂಕಿನ ಒಂದು ಗ್ರಾಮದಲ್ಲಿ ಇಡೀ ದಿನ ವಾಸ್ತವ್ಯ ಮಾಡಿ ಅಲ್ಲಿನ ಸಾಧಕ-ಬಾಧಕಗಳ ಮಾಹಿತಿ ಸಂಗ್ರಹಿಸಿ ಆಡಳಿತದ ಕಣ್ಣು ತೆರೆಸುವ ಪ್ರಯತ್ನ ಮಾಡಲಿದ್ದಾರೆ.
ಇದೊಂದು ಪುಟ್ಟ ಗ್ರಾಮ. ಜಿಲ್ಲೆಯ ದೇವ ಮೂಲೆಯಲ್ಲಿದೆ. ಹೀಗಾಗಿ ಬಹುತೇಕ ರಾಜಕಾರಣಿಗಳು ಚುನಾವಣಾ ಪ್ರಚಾರ ಕಾರ್ಯವನ್ನು ಈ ಗ್ರಾಮದಿಂದಲೇ ಆರಂಭಿಸುತ್ತಾರೆ. ಆದರೆ ಸಮಸ್ಯೆಗಳನ್ನೇ ಹೊದ್ದು ಮಲಗಿರುವ ಈ ಗ್ರಾಮಸ್ಥರು ಪ್ರತಿಯೊಂದಕ್ಕೂ ನೆರೆಯ ಗ್ರಾಮಗಳನ್ನೇ ಆಶ್ರಯಿಸಬೇಕು, ಇರುವುದರಲ್ಲಿಯೇ ಬದುಕು ಸವೆಸಬೇಕು. ಹೌದು... ಕಣ್ವ ರಸ್ತೆಯಿಂದ 2 ಕಿಮೀ ಒಳಹೊಕ್ಕರೆ ಹಚ್ಚ ಹಸಿರಿನ ನಡುವೆ ಗೂಡು ಕಟ್ಟಿಕೊಂಡಿರುವ ಗ್ರಾಮವೇ ಸರಗೂರುದೊಡ್ಡಿ.
ಕೆಂಗಲ್ ದೇವಸ್ಥಾನದಿಂದ ಕಣ್ವ ಜಲಾಶಯಕ್ಕೆ ಹೋಗುವ ರಸ್ತೆಯಲ್ಲಿರುವ ಈ ಗ್ರಾಮ ಬಹುತೇಕ ಮಂದಿಗೆ ಗೊತ್ತೇ ಇಲ್ಲ. 25ಕ್ಕೂ ಹೆಚ್ಚು ಮನೆಗಳಿದ್ದು, 150 ಜನಸಂಖ್ಯೆ ಹೊಂದಿದೆೆ. ಒಕ್ಕಲಿಗ ಹಾಗೂ ದಲಿತ ಸಮುದಾಯದವರು ಇಲ್ಲಿದ್ದಾರೆ. ಇರುವ ಎರಡು ಬೀದಿಗಳಿಗೆ ಸಿಸಿ ರಸ್ತೆ ಹಾಗೂ ಕೆಲದೂರ ಚರಂಡಿ ಹೊರತುಪಡಿಸಿದರೆ, ಗ್ರಾಮದ ಜನತೆಗೆ ಉಳಿದ ಮೂಲಸೌಕರ್ಯಗಳಿಲ್ಲ.
ಖಾಸಗಿ ವಾಹನಗಳ ಸಂಪರ್ಕವೂ ಇಲ್ಲ: ರಾಂಪುರ ಗ್ರಾಪಂ ವ್ಯಾಪ್ತಿಯ ಗ್ರಾಮಕ್ಕೆ ಸುಸಜ್ಜಿತ ರಸ್ತೆಯಿಲ್ಲ. ಗ್ರಾಮ ಸಂಪರ್ಕಿಸಲು ಮೂರು ರಸ್ತೆಗಳೇನೋ ಇವೆ, ಆದರೆ ಅವು ವಾಹನ ಅಥವಾ ಜನಸಂಚಾರಕ್ಕೆ ಯೋಗ್ಯವಾಗಿಲ್ಲ. ಕಣ್ವ ರಸ್ತೆಯಲ್ಲಿ ನಿರ್ವಾಣವಾಗಿರುವ ಕೆಎಂಎಫ್ ಹಾಲಿನ ಪುಡಿ ತಯಾರಿಕಾ ಟಕದ ಮಗ್ಗುಲ್ಲಲ್ಲಿ ಇರುವ ಕಿರಿದಾದ ರಸ್ತೆಯಲ್ಲಿಯೇ ಈ ಗ್ರಾಮದ ಜನತೆ ತಿರುಗಾಡಬೇಕಿದೆ. ಮಕ್ಕಳು ಶಾಲೆ, ಅಂಗನವಾಡಿಗೆ, ನಗರಕ್ಕೆ ಬರುವವರು, ಹಾಲು ಹಾಕಲು ಡೇರಿಗೆ ಹೋಗಲು ಈ ರಸ್ತೆಯನ್ನೇ ಬಳಸಬೇಕಾಗಿದೆ. ಗ್ರಾಮಕ್ಕೆ ಸರ್ಕಾರಿ ಸಾರಿಗೆ ಸಂಪರ್ಕವಿರಲಿ, ಖಾಸಗಿ ವಾಹನಗಳ ಸಂಪರ್ಕವೂ ಇಲ್ಲ. ಸೈಕಲ್ ಹಾಗೂ ದ್ವಿಚಕ್ರ ವಾಹನಗಳೇ ಗ್ರಾಮದ ಜನತೆಯ ಸಂಚಾರ ಸಾಧನ. ಅದಿಲ್ಲದಿದ್ದರೆ ಕಾಲ್ನಡಿಗೆಯೇ ಗತಿ.
ಎಲ್ಲದಕ್ಕೂ ನೆರೆಯ ಗ್ರಾಮಗಳೇ ಆಸರೆ: ಗ್ರಾಮಸ್ಥರು ಮತ ಹಾಕಲು 3 ಕಿ.ಮೀ. ದೂರದ ಅಂಗರಹಳ್ಳಿಗೆ ಹೋಗಬೇಕು. ಗ್ರಾಪಂ ಸದಸ್ಯ ಕೂಡ ಅಂಗರಹಳ್ಳಿಯವರು. ಅಂಗನವಾಡಿ, ಶಾಲೆಗಳಿಗೂ ಅಂಗರಹಳ್ಳಿ ಅಥವಾ ಕನ್ನಮಂಗಲಕ್ಕೆ ಹೋಗಬೇಕು. ಕೃಷಿ, ಹೈನುಗಾರಿಕೆ ಜತೆಗೆ ಕುರಿ ಸಾಕಣೆಯೂ ಗ್ರಾಮದ ಜನರ ಪ್ರಮುಖ ಆಧಾರವಾಗಿದೆ. ಆದರೆ ಸೌಲಭ್ಯಗಳಿಲ್ಲದ ಕಾರಣ, ಜನತೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪ್ರತ್ಯೇಕ ಕೊಳಾಯಿ ಸಂಪರ್ಕ ಇಲ್ಲ: ಗ್ರಾಮದಲ್ಲಿ ಮೂರು ನೀರಿನ ತೊಂಬೆಗಳಿವೆ. ಮನೆಗಳಿಗೆ ಪ್ರತ್ಯೇಕ ಕೊಳಾಯಿ ಸಂಪರ್ಕ ಇಲ್ಲ. ಶುದ್ಧ ನೀರಿನ ಘಟಕವಂತೂ ಗಗನಕುಸುಮ. ಅಚ್ಚರಿಯೆಂದರೆ ಈ ಗ್ರಾಮದಲ್ಲಿ ಇದುವರೆಗೂ ಪಂಚಾಯಿತಿ ವತಿಯಿಂದ ಒಂದೇ ಒಂದು ಗ್ರಾಮಸಭೆ ನಡೆದ ಉದಾಹರಣೆಯಿಲ್ಲ. ಬೀದಿ ದೀಪವಿದೆ, ಆದರೆ ಕೆಟ್ಟರೆ ದುರಸ್ತಿಯಾಗಲು ತಿಂಗಳುಗಟ್ಟಲೇ ಸಮಯ ಬೇಕು. ಗ್ರಾಮದ ಬಳಿ ಬೆಟ್ಟಗುಡ್ಡಗಳಿದ್ದು, ಚಿರತೆಗಳ ಕಾಟವೂ ಹೆಚ್ಚಾಗಿದೆ.
ಗ್ರಾಮ ದೇವರಿಗೂ ನೆಲೆ ಇಲ್ಲ: ಸರಗೂರುದೊಡ್ಡಿ ಜನ ಇರುವ ವ್ಯವಸ್ಥೆಯಲ್ಲಿಯೇ ಬದುಕು ಸವೆಸುತ್ತಿದ್ದಾರೆ. ಮುತ್ತುರಾಯಸ್ವಾಮಿ ಈ ಗ್ರಾಮದ ದೇವರು. ಈತನ ಗುಡಿಯೂ ಶಿಥಿಲಾವಸ್ಥೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ನೂತನ ದೇವಸ್ಥಾನ ಕಟ್ಟಲು ದೇವರಮೂರ್ತಿಯನ್ನು ಚಿಕ್ಕಕೊಠಡಿಯಲ್ಲಿಟ್ಟು ಪೂಜಿಸುತ್ತಿದ್ದಾರೆ. ದೇವಸ್ಥಾನ ಕಟ್ಟಲು ಜನಪ್ರತಿನಿಧಿಗಳು ಸಹಾಯ ವಾಡುವುದಾಗಿ ನೀಡಿರುವ ಭರವಸೆ ಈಡೇರಿಲ್ಲ. ಹೀಗಾಗಿ ಗ್ರಾಮ ದೇವರಿಗೂ ನೆಲೆ ಇಲ್ಲದಂತಾಗಿದೆ.
ಒಟ್ಟಾರೆ, ತಾಲೂಕನ್ನು ಇದುವರೆಗೂ ಪ್ರತಿನಿಧಿಸಿರುವ ಜನಪ್ರತಿನಿಧಿಗಳು ಗ್ರಾಮದ ಬಗ್ಗೆ ಕಾಳಜಿ ತೋರದಿರುವುದು ಗ್ರಾಮದ ಜನರಿಗೆ ನಿರಾಸೆ ಉಂಟುಮಾಡಿದೆ. ರೇಷ್ಮೆ, ವಾವು, ಹೈನುಗಾರಿಕೆ ಹಾಗೂ ಕುರಿ ಸಾಕಣೆ ನಡೆಸುತ್ತ ಜೀವನ ಸಾಗಿಸುತ್ತಿರುವ ಗ್ರಾಮಸ್ಥರು ಸಾರಿಗೆ ಸಂಪರ್ಕ ಹಾಗೂ ಮೂಲ ಸವಲತ್ತುಗಳ ನಿರೀಕ್ಷೆಯಲ್ಲಿದ್ದಾರೆ.
ವಾಜಿ ಸಚಿವ ದಿವಂಗತ ವರದೇಗೌಡರು ನಮ್ಮ ಊರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರು. ಗ್ರಾಮದಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಗ್ರಾಮದ ಅಭಿವೃದ್ಧಿಗೆ ಹಲವು ಭರವಸೆಗಳನ್ನು ಜನಪ್ರತಿನಿಧಿಗಳು ನೀಡಿದ್ದಾರೆ. ಆದರೆ, ಯಾವುದೂ ಈಡೇರಿಲ್ಲ. ಶಾಸಕರಾದ ಎಚ್.ಡಿ. ಕುವಾರಸ್ವಾಮಿ ಬಗ್ಗೆ ಭರವಸೆ ಇಟ್ಟುಕೊಂಡಿದ್ದೇವೆ.
ರಾಮಣ್ಣ, ಗ್ರಾಮದ ಹಿರಿಯ
***
ಗ್ರಾಮದ ಮಕ್ಕಳು ಅಂಗನವಾಡಿ ಹಾಗೂ ಶಾಲೆಗೆ ತೆರಳಲು 2-3 ಕಿ.ಮೀ. ಹೋಗಬೇಕು. ನಿರ್ಜನ ಹಾಗೂ ಅವ್ಯವಸ್ಥೆಯ ದಾರಿಯಲ್ಲಿ ತೆರಳಿ ವಿದ್ಯಾಭ್ಯಾಸ ವಾಡಬೇಕಾದ ಸ್ಥಿತಿ ಇದೆ. ಓದಲು ನಗರಕ್ಕೆ ಹೋಗುವುದಂತೂ ಸವಾಲಿನ ಕೆಲಸ. ಇದರಿಂದಾಗಿಯೇ ಹಲವರು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಂಗ ವಾಡುತ್ತಿದ್ದೇನೆ. ಪ್ರತಿನಿತ್ಯ ತಂದೆಯ ಬೈಕ್ ತೆಗೆದುಕೊಂಡು ಕಾಲೇಜಿಗೆ ಹೋಗಿ ಬರುತ್ತೇನೆ. ಗ್ರಾಮಕ್ಕೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕು.
ಸರಸ್ವತಿ, ಬಿಕಾಂ ವಿದ್ಯಾರ್ಥಿನಿ
***
ರೇಷ್ಮೆ, ವಾವು, ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆ ನಡೆಸುತ್ತ ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ. ಪ್ರತಿನಿತ್ಯ 2 ಕ್ಯಾನ್ ಹಾಲು ಉತ್ಪಾದನೆಯಾಗುತ್ತದೆ. ಇದನ್ನು ಪಕ್ಕದ ಗ್ರಾಮದ ಡೇರಿಗೆ ತೆಗೆದುಕೊಂಡು ಹೋಗಬೇಕು. ಕೃಷಿ ಉತ್ಪನ್ನಗಳನ್ನು ವಾರಾಟ ವಾಡಲು ಸಾರಿಗೆ ಸಂಪರ್ಕ ಇಲ್ಲ. ಗ್ರಾಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರೆ ಗ್ರಾಮದ ಜನತೆಯ ಬವಣೆ ಅರ್ಥವಾಗುತ್ತದೆ.
ಶಂಕರ, ಗ್ರಾಮದ ಯುವಕ