ಜಿಲ್ಲೆ

ಸರ್ಕಾರಿ ಸವಲತ್ತುಗಳ ಸದುಪಯೋಗ ಪಡೆಯಿರಿ

ಚಾಮರಾಜನಗರ: ಸರ್ಕಾರದಿಂದ ಅಂಗವಿಕಲರಿಗೆ ನೀಡುವ ಸಾಧನ, ಸಲಕರಣೆಯಿಂದ ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದ್ದು, ಸರ್ಕಾರಿ ಅವಲತ್ತುಗಳ ಸದುಪಯೋಗಪಡೆದುಕೊಳ್ಳಿ ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ವ್ಯಾಪ್ತಿಯ ವಿಶೇಷಚೇತನರಿಗೆ ಒಟ್ಟು 3.86 ಲಕ್ಷ ರೂ. ವೆಚ್ಚದ ತ್ರಿಚಕ್ರ ವಾಹನ, ಹೊಲಿಗೆಯಂತ್ರ, ಬ್ಯಾಟರಿ ಚಾಲಿತ ವೀಲ್ ಚೇರ್, ಕೈಗಡಿಯಾರ, ಇನ್ನಿತರ ಸಾಧನ ಸಲಕರಣೆಗಳನ್ನು ವಿತರಿಸಿ ಮಾಡಿದರು.

ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ 3 ಲಕ್ಷ ರೂ.ಗಳಿಗೂ ಹೆಚ್ಚಿನ ಮೊತ್ತದ ಸಾಧನ ಸಲಕರಣೆಗಳನ್ನು ಅವಶ್ಯವಿರುವ 10 ಜನರಿಗೆ ವಿತರಿಸಲಾಗಿದೆ. ವಿವಿಧ ಇಲಾಖೆಗಳು, ಸಚಿವರು, ಶಾಸಕರು, ಸಂಸದರು, ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವ ಅನುದಾನದಲ್ಲಿ ವಿಶೇಷಚೇತನರಿಗಾಗಿಯೇ ಶೇ.5ರಷ್ಟು ಅನುದಾನವನ್ನು ಸರ್ಕಾರ ಮೀಸಲಿರಿಸಿದೆ. ಅಂಗವಿಕಲರು ಇದರ ಸದುಪಯೋಗ ಪಡೆಯಬೇಕು ಎಂದರು.

ಅಂಗವಿಕಲರಿಗೆ ಕೇವಲ ಅನುಕಂಪ ತೋರುವುದು ಬೇಡ, ಅವರ ಶ್ರೇಯೋಭಿವೃದ್ಧಿಗಾಗಿ ನಿಗದಿಯಾಗಿರುವ ಅನುದಾನದಲ್ಲಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿದರೆ ಸಾಕು, ಅಂಗವಿಕಲರ ಬದುಕು ಹಸನಾಗಲಿದೆ. ಸಮಾಜದಲ್ಲಿ ಅವರು ಸಹ ಇತರರಂತೆ ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಯ್ಯದ್ ರಫೀ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರೂಪೇಶ್ ಇತರರು ಹಾಜರಿದ್ದರು.