ಹನೂರು:·ಸರ್ಕಾರದ ಸವಲತ್ತುಗಳ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಪಡೆದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಆನಂದಯ್ಯ ತಿಳಿಸಿದರು.·ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಸಭಾಂಗಣದಲ್ಲಿ ಭಾನುವಾರ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಆಯೋಜಿಸಿದ್ದ ಸರ್ಕಾರದ ಸವಲತ್ತುಗಳ ಮಾಹಿತಿ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಇಲಾಖೆಯಲ್ಲಿ ಆಯಾ ವರ್ಗದ ಜನರಿಗೆ ವಿವಿಧ ಯೋಜನೆಯಡಿ ಹಲವು ಸವಲತ್ತುಗಳಿದ್ದು, ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಕೆಲವರು ಮಾಹಿತಿ ತಿಳಿಯದ ಹಿನ್ನೆಲೆಯಲ್ಲಿ ಸರ್ಕಾರದಿಂದ ಸಿಗುವ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಮಾಹಿತಿ ಪಡೆದು ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಂದಾಯ ಇಲಾಖೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಆರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ, ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ, ವಂಶವೃಕ್ಷ, ಭೂ ಹಿಡುವಳಿ, ವಿಧವಾ ಪ್ರಮಾಣ ಪತ್ರ, ಜೀವಂತ ದೃಢೀಕರಣ ಪತ್ರ, ವ್ಯವಸಾಯಗಾರರ ಪ್ರಮಾಣ ಪತ್ರ ಸೇರಿದಂತೆ ಇನ್ನಿತರೆ ಹಲವು ಪ್ರಮಾಣ ಪತ್ರಗಳ ಸೇವೆಯನ್ನು ಒದಗಿಸಲಾಗುತ್ತಿದೆ. ಪ್ರಕೃತಿ ವಿಕೋಪದಡಿ ಹಾನಿಯಾದ ಮನೆ, ಬೆಳೆಗಳಿಗೆ ವರದಿ ಆಧಾರದ ಮೇಲೆ ಪರಿಹಾರ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್‌ಕುಮಾರ್ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ತಾಲೂಕಿನಲ್ಲಿ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನವನ್ನು ಪಡೆಯುವ ಫಲಾನುಭವಿಗಳು ಪ್ರತಿ ತಿಂಗಳು ಹಣ ಪಡೆಯಲು ಅಂಚೆ ಕಚೇರಿ ಹಾಗೂ ಹಣ ವಿತರಿಸಲು ನಿಯೋಜಿಸಲ್ಪಟ್ಟ ವ್ಯಕ್ತಿ ಮನೆಯ ಮುಂದೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದರಿಂದ ಜನರು ತುಂಬಾ ತೊಂದರೆ ಪಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.
·