ಜಿಲ್ಲೆ

ಸರ್ಕಾರಿ ಸವಲತ್ತು ಸದುಪಯೋಗ ಪಡಿಸಿಕೊಳ್ಳಿ: ಎಸ್.ಎ. ರಾಮದಾಸ್

Mysuru

ಮೈಸೂರು: ಸರ್ಕಾರ ಬಡವರು ಹಾಗೂ ಮಧ್ಯಮ ವರ್ಗದವರಿಗೆಂದೇ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನತಾನಗರದ ಕನಕಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಾರ್ಡ್ ನಂ.43ರ ಸರ್ಕಾರಿ ಸವಲತ್ತುಗಳ ಅದಾಲತ್, ಆಧಾರ್ ಕಾರ್ಡ್ ನವೀಕರಣ, ವಾರ್ಡ್ ಸಮಸ್ಯೆ ಮತ್ತು ಪರಿಹಾರ, ಉಚಿತ ಮಧುಮೇಹ ಮತ್ತು ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಹಳಷ್ಟು ಜನರಿಗೆ ಸರ್ಕಾರಿ ಕಚೇರಿಗೆ ಹೋಗಿ ತಮಗೆ ನ್ಯಾಯಬದ್ಧವಾಗಿ ಸಿಗಬೇಕಿರುವ ಸವಲತ್ತುಗಳನ್ನು ಕೇಳಲು ಮುಜುಗರ, ಹಾಗಾಗಿಯೇ ಇಂದು ಇಡೀ ಸರ್ಕಾರಿ ವ್ಯವಸ್ಥೆಯೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ದಯವಿಟ್ಟು ಸದುಪಯೋಗ ಮಾಡಿಕೊಳ್ಳಿ. ನಾಗರಿಕ ಸೌಲಭ್ಯಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿಯೇ ಈ ಕಾರ್ಯಕ್ರಮ ರೂಪಿಸಲಾಗಿದೆ. ಇಂತಹ ವ್ಯವಸ್ಥೆ ಲಭಿಸಿವುದು ಅಪರೂಪವಾಗಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 70 ಸಾವಿರ ಮನೆಗಳಿದ್ದು, ಆ ಮನೆಗಳಲ್ಲಿರುವ ವಾಸಿಗಳ ಪೈಕಿ ಸರಿಸುಮಾರು 60 ಸಾವಿರಕ್ಕೂ ಹೆಚ್ಚು ಜನರಿಗೆ ಸಕ್ಕರೆ ಕಾಯಿಲೆ ಇರುವುದು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಡೆಸಿದ ಸಮೀಕ್ಷೆ ವೇಳೆ ಕಂಡುಬಂದಿದೆ. ಇದು ಆಘಾತಕಾರಿ ಬೆಳವಣಿಗೆ. ಆದರೆ, ಇದನ್ನು ನಿವಾರಿಸಿಯೇ ತೀರಬೇಕು ಎಂಬ ಸಂಕಲ್ಪ ಮಾಡಲಾಗಿದ್ದು, ಇದಕ್ಕಾಗಿ ಮುಂದಿನ ಐದು ವರ್ಷಗಳ ಕಾಲದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ದೈನಂದಿನ ಬದುಕಿನ ಒತ್ತಡದಿಂದಾಗಿ ಇಂದು ಸಕ್ಕರೆ ಕಾಯಿಲೆ ವ್ಯಾಪಕವಾಗಿ ಹರಡಿದ್ದು, ಅದರ ವಿರುದ್ಧ ಸಮರ ಸಾರುವ ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾಯಿಲೆ ವಿರುದ್ಧ ನಾವು ಸಮರ ಸಾರಲೇಬೇಕಿದೆ. ಆ ಕಾರಣಕ್ಕಾಗಿ ಮುಂದಿನ ಐದು ವರ್ಷಗಳ ಕಾಲ ಈ ಕುರಿತಾದ ಆರೋಗ್ಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.