ಜಿಲ್ಲೆ

ಸರ್ಕಾರಿ ಸವಲತ್ತು ಬಳಸಿಕೊಳ್ಳುವಲ್ಲಿ ದಲಿತ ಸಮುದಾಯ ವಿಫಲ

ಕುಶಾಲನಗರ: ಸರ್ಕಾರ ದಲಿತ ಸಮುದಾಯದ ಏಳಿಗೆಗಾಗಿ ವಿವಿಧ ಇಲಾಖೆಗಳಲ್ಲಿ 500ಕ್ಕೂ ಹೆಚ್ಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಆದರೆ ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಮುದಾಯ ವಿಫಲವಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಇತ್ತೀಚೆಗೆ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ತಾಲೂಕು ಶಾಖೆಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ವಿಶೇಷ ಯೋಜನೆ ಹಾಗೂ ಸವಲತ್ತುಗಳ ಬಗ್ಗೆ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.

ಮೈಸೂರು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ದಲಿತರು ಸ್ವಾರ್ಥಿಗಳಾಗುತ್ತಿದ್ದಾರೆಯೇ ಹೊರತು ಸ್ವಾವಲಂಬಿಗಳಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಆಶಯದಂತೆ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಹಕಾರ ಸಂಘ ಆಸ್ತಿತ್ವಕ್ಕೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಪುರಸಭೆ ಅಧ್ಯಕ್ಷ ಬಿ.ಜಯವರ್ಧನ್ ಮಾತನಾಡಿ, ಅಂಬೇಡ್ಕರ್ ಆಶಯದಂತೆ ಈ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿರುವುದು ಸಮುದಾಯದಲ್ಲಿ ನವಚೈತನ್ಯ ಮೂಡಿಸಿದೆ. ಇದೇ ರೀತಿ ಸಮುದಾಯದ ಬಾಂಧವರು ಸಂಘಟಿತರಾಗುವ ಮೂಲಕ ಸಂಘದ ಏಳಿಗೆಗೆ ಒತ್ತು ನೀಡಬೇಕು ಎಂದರು.

ಇದೇ ಸಂದರ್ಭ ಸ್ವಾಮೀಜಿ, ಅತಿಥಿಗಳು ಹಾಗೂ ಸಂಘದ ಸ್ಥಾಪನೆಗೆ ಶ್ರಮಿಸಿದ ಮುಖಂಡರನ್ನು ಸನ್ಮಾನಿಸಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಡಿ.ಚಂದ್ರು ಪಾಸ್ ಪುಸ್ತಕ ವಿತರಿಸಿದರು. ಜಿ.ಪಂ.ಮಾಜಿ ಸದಸ್ಯೆ ಇಂದಿರಮ್ಮ ಷೇರು ಪತ್ರ ವಿತರಿಸಿದರು. ಮುಂಬೈ ಉದ್ಯಮಿ ಸದಾಶಿವ, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ನಂದಿನಿ, ಹಾಸನ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಾಲಿಂಗಯ್ಯ, ಜಿಲ್ಲಾ ಎಸ್ಸಿ-ಎಸ್ಟಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ಪಿರಿಯಾಪಟ್ಟಣ ಎವಿಎಸ್‌ಎಸ್ ಅಧ್ಯಕ್ಷ ರಾಮು ಐಲಾಪುರ, ಸಂಘದ ಮುಖಂಡರಾದ ಎಚ್.ಬಿ.ಗಣೇಶ್, ಬಿ.ಸಿ.ರಾಜು, ನಿವೃತ್ತ ಪ್ರಾಂಶುಪಾಲ ಬೆಳ್ಳಿಯಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ನಿವೃತ್ತ ಮುಖ್ಯಶಿಕ್ಷಕ ರಾಜು, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಉಪಸ್ಥಿತರಿದ್ದರು.