Valuable education for children in government schools 
ಜಿಲ್ಲೆ

ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ

ಮಳವಳ್ಳಿ: ಸಂಸ್ಕೃತಿ ಹಾಗೂ ಸಂಸ್ಕಾರದ ಜತೆಗೆ ಮೌಲ್ಯಯುತ ಶಿಕ್ಷಣ ದೊರೆಯುವುದು ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಮಾತ್ರ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಅಪ್ಪುಗೆರೆ ತಿಪ್ಪರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಬಾಣಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ತರಬೇತಿ ಪಡೆದ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳ ಬೋಧನೆ ಸಿಗುತ್ತದೆ. ಖಾಸಗಿ ಶಾಲೆಗಳಲ್ಲಿ ನಮ್ಮ ನಾಡಿನ ಪರಂಪರೆ ಸಂಸ್ಕೃತಿಗಳ ಅರಿವನ್ನೇ ಮೂಡಿಸುವುದಿಲ್ಲ. ಕೇವಲ ಅಂಕಗಳಿಗೆ ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಒತ್ತಡದ ಸೃಷ್ಟಿಸಿ, ಪುಸ್ತಕದ ಪಠ್ಯಗಳಿಗಷ್ಟೇ ಅವರನ್ನು ಸೀಮಿತಗೊಳಿಸಲಾಗುತ್ತಿದೆ. ಹಾಗಾಗಿ ಸಂಸ್ಕಾರಗಳ ಕೊರತೆಯ ಜತೆಗೆ ಜನಪದ ಸೊಗಡಿನಲ್ಲಿರುವ ತತ್ವಗಳ ಅರಿವಿಲ್ಲದೆ ಶಿಕ್ಷಣ ಕಲಿಕೆಯು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಕಾಣುವುದು ಕಷ್ಟವಾಗುತ್ತದೆ ಎಂದರು.

ಈ ಎಲ್ಲ ಮೌಲ್ಯಧಾರಿದ ಶಿಕ್ಷಣ ದೊರೆಯುವ ಸರ್ಕಾರಿ ಶಾಲೆಗಳಿಗೆ ಪಾಲಕರು ತಮ್ಮ ಮಕ್ಕಳನ್ನು ದಾಖಲಿಸಿದರೆ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಜತೆಗೆ ಭಾರತೀಯ ಪರಂಪರೆ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯವ ಕೊಂಡಿಯಾಗಲು ಸಹಕಾರಿಯಾಗುತ್ತದೆ ಎಂದು ಪಾಲಕರಲ್ಲಿ ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾ ಮಾತನಾಡಿದರು. ಹಲಗೂರು ಪೊಲೀಸ್ ಠಾಣೆ ಪಿಎಸ್‌ಐ ಲೋಕೇಶ್, ಕ್ಷೇತ್ರ ಸಮನ್ವಯ ಅಧಿಕಾರಿ ನಿವಾಸ್, ಕೀರಂ ಫೌಂಡೇಶನ್ ಚಂದನ ಹರ್ಷ, ತಾಪಂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹದೇವ, ಶಿಕ್ಷಣ ಸಂಯೋಜಕ ಅಧಿಕಾರಿ ಯೋಗಾನಂದ, ಸಂಪನ್ಮೂಲ ವ್ಯಕ್ತಿಗಳಾದ ಬಾಬು, ರವಿಕುಮಾರ್, ಲೋಕೇಶ್ ಸೇರಿದಂತೆ ಗ್ರಾಮದ ನಾಡಗೌಡರು, ಯಜಮಾನರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪಾದಾಧಿಕಾರಿಗಳು ಇದ್ದರು.

==============

17 ಎಂಎಲ್‌ವಿ 4

ಮಳವಳ್ಳಿ ತಾಲೂಕಿನ ಬಾಣಸಮುದ್ರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜನಪದ ಕಲಾವಿದ ಅಪ್ಪುಗೆರೆ ತಿಪ್ಪರಾಜು ಉದ್ಘಾಟಿಸಿದರು. ಬಿಇಒ ಉಮಾ, ಲೋಕೇಶ್, ಶ್ರೀನಿವಾಸ್, ಚಂದನ, ಹರ್ಷ, ಮಹದೇವ, ಯೋಗಾನಂದ, ಬಾಬು, ರವಿಕುಮಾರ್ ಇದ್ದರು.

=====================