ಸಿಟಿಗೂ
ಕೋಲಾರ : ಬೆಂಗಳೂರಿನ ಖಾಸಗಿ ಉದ್ಯೋಗಿಯೊಬ್ಬರು ಮಗಳಿಗೆ ಶಾಲೆಯಲ್ಲಿ ಆದ ಮುಟ್ಟಿನ ತೊಂದರೆ ಅರಿತು ಆ ರೀತಿ ಯಾವೊಬ್ಬ ಹೆಣ್ಣು ಮಗಳಿಗೂ ಆಗಬಾರದು ಎಂದು ದಾನಿಗಳ ಸಹಕಾರ ಪಡೆದು ಪಿಂಕ್ ರೂಂಗಳ ನಿಮಾರ್ಣಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಕೋಲಾರ ತಾಲೂಕು ಮದನಹಳ್ಳಿ ಕ್ರಾಸ್ ಬಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುರುಗಲ್ ಸರ್ಕಾರಿ ಶಾಲೆ ಮತ್ತು ತಾಲೂಕಿನ ಕ್ಯಾಲನೂರು ಸರ್ಕಾರಿ ಶಾಲೆಯಲ್ಲಿ ಕೊಠಡಿ ನಿರ್ಮಿಸಲಾಗಿದೆ.
ಬೆಂಗಳೂರಿನ ಉದ್ಯೋಗಿಯಾಗಿರುವ ಅಂಥೋಣಿ ಸುಜಿತ್ ಅವರು ಈ ಕಾರ್ಯಕ್ಕೆ ಮುಂದಾಗಿದ್ದು, ಗ್ರಾಮೀಣ ಭಾಗದಿಂದ ಹತ್ತಾರು ಕಿಮೀ ದೂರದಿಂದ ಸರ್ಕಾರಿ ಶಾಲೆ&ಕಾಲೇಜಿಗೆ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಬರುತ್ತಾರೆ. ಶಾಲೆ ಅವಧಿಯಲ್ಲಿ ಮುಟ್ಟು ಆದಾಗ ಅನೇಕ ತೊಂದರೆ ಅನುಭವಿಸುವ ಪ್ರಸಂಗಗಳು ಎದುರಾಗುತ್ತವೆ. ಕೆಲವು ಶಾಲೆಗಳಲ್ಲಿ ಸುಸಜ್ಜಿತ ಶೌಚಗೃಹ ಇರುವುದಿಲ್ಲ. ಇದ್ದರೂ ನೀರಿನ ಕೊರತೆ, ವಿಶ್ರಾಂತಿ ಕೊಠಡಿಗಳ ಸಮಸ್ಯೆಯಿಂದ ಮುಜುಗರ ಅನುಭವಿಸುತ್ತಾರೆ. ಈ ಸಮಸ್ಯೆ ನೀಗಿಸಲು ಅಂಥೋಣಿ ಸುಜಿತ್ ಪಿಂಕ್ ರೂಂಗಳ ನಿಮಾರ್ಣಕ್ಕೆ ಮಂದಾಗಿದ್ದಾರೆ.
ಏನಿದು ಪಿಂಕ್ ರೂಂ?
ಪಿಂಕ್ ರೂಂನಲ್ಲಿ ತಲಾ ಒಂದು ಭಾರತೀಯ ಹಾಗೂ ಪಾಶ್ಚಿಮಾತ್ಯ ಶೈಲಿಯ ಶೌಚಗೃಹ, ಉಡುಪು ಬದಲಾಯಿಸುವ ಕೊಠಡಿ, ಕೈ ತೊಳೆಯುವ ಬೇಷಿನ್, ಸ್ಯಾನಿಟರಿ ಪ್ಯಾಡ್ ಯಂತ್ರ, ಪ್ಯಾಡ್ ಸುಡುವ ಯಂತ್ರ, ಎರಡು ಮಂಚ ಹಾಗೂ ಎರಡು ಹಾಸಿಗೆ ವ್ಯವಸ್ಥೆ ಇದೆ. ಓದಲು ಟೇಬಲ್ ಹಾಗೂ ಪುಸ್ತಕಗಳು ಲಭ್ಯವಿರುತ್ತವೆ.
ಸರ್ಕಾರ, ದಾನಿಗಳು ಮುಂದೆ ಬರಬೇಕು
ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಮುಟ್ಟಿನ ವೇಳೆ ಸೌಲಭ್ಯಗಳು ಇಲ್ಲದ 2 ಶಾಲೆಗಳಲ್ಲಿ ಪಿಂಕ್ ರೂಂ ಪ್ರಾರಂಭಿಸಿದ್ದೇನೆ. ಮೂರನೇಯದಾಗಿ ಕ್ಯಾಲನೂರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭಿಸಲಾಗಿದ್ದು, ಶನಿವಾರ ಉದ್ಘಾಟನೆಗೊಳ್ಳಲಿದೆ. ಸರ್ಕಾರ ಕಾರ್ಖಾನೆಗಳ ಸಿಎಸ್ಆರ್ ಅನುದಾನ, ದಾನಿಗಳ ಸಹಾಯ ಪಡೆದು ಜಿಲ್ಲೆಯ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸುವ ಜತೆಗೆ ಖಾಸಗಿ ಶಾಲಾ ಕಾಲೇಜುಗಳಲ್ಲೂ ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ ಎಂದು ಅಂಥೋಣಿ ತಿಳಿಸಿದ್ದಾರೆ.
ನತೆಯಿಂದ ಬದುಕುವ ಬದಲಾವಣೆ
ವಿದ್ಯಾರ್ಥಿನಿಯರು ತಿಂಗಳ ಋತು ಸಮಯದಲ್ಲಿ ತರಗತಿ ತಪ್ಪಿಸಿಕೊಳ್ಳಬಾರದು, ಬದಲಾಗಿ ಈ ಕೊಠಡಿಯಲ್ಲಿ ವಿಶ್ರಾಂತಿ ಪಡೆದು ಮತ್ತೆ ತರಗತಿಗೆ ಹೋಗಬಹುದು ಎಂಬ ಉದ್ದೇಶದಿಂದ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮೀಣ ಶಾಲೆಗಳಿಗೆ ದೂರದಿಂದ ಬರುವ ಪ್ರತಿ ಬಾಲಕಿಗೂ ಇಂಥ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಯೋಜನೆಯ ನೆರವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಅಂಥೋಣಿ ಸಜೀತ್ ಕೋರುತ್ತಾರೆ. ಮುಟ್ಟಿನ ಅವಧಿಯಲ್ಲಿ ಯುವತಿಯರು ಧೈರ್ಯ ಹಾಗೂ ಘನತೆಯಿಂದ ಬದುಕುವ ವಾತಾವರಣ ಸೃಷ್ಟಿಸುವ ಮೂಲಕ ಬದಲಾವಣೆ ಬರೆಯೋಣ ಎಂದು ಮನವಿ ಮಾಡಿದ್ದಾರೆ ಖಾಸಗಿ ಉದ್ಯಮಿ.
ನನ್ನ ಮಗಳು ಶಾಲೆಯಲ್ಲೇ ಮುಟ್ಟಾಗಿ ಸಂಕಟ ಹಾಗೂ ಮುಜುಗರಪಡುತ್ತಿದ್ದಳು. ಏನೂ ಅರಿಯದ ಆಕೆಗೆ ಅದು ಮೊದಲ ಮುಟ್ಟು. ಸುಮಾರು 22 ಕಿಮೀ ದೂರದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಶಾಲೆಯಿಂದ ತುರ್ತು ಕರೆ ಬರುತ್ತದೆ. ಶಾಲೆಗೆ ಓಡೋಡಿ ಬಂದು ಮಗಳ ಸಂಕಷ್ಟ ನೋಡಿದಾಗ ರಕ್ತಸ್ರಾವದಿಂದ ಬಳಲಿದ್ದ ಆಕೆಯನ್ನು ಸಮಾಧಾನಪಡಿಸಿದೆ. ಆದರೆ, ಶಾಲೆಯಲ್ಲಿ ಪ್ರತ್ಯೇಕ ಕೊಠಡಿಯಾಗಲಿ, ಸೌಲಭ್ಯವಾಗಲಿ ಇಲ್ಲದ ಕಾರಣ ಆ ಬಾಲಕಿ ಮತ್ತಷ್ಟು ಮುಜುಗರಕ್ಕೆ ಒಳಗಾದಳು. ಈ ಅವ್ಯವಸ್ಥೆಗೆ ಬೆಸತ್ತು ಖಾಸಗಿ ಸಹಭಾಗಿತ್ವದಲ್ಲಿ ಪಿಂಕ್ ರೂಂ ನಿಮಾರ್ಣ ಮಾಡಬೇಕೆಂದು ಪಣತೊಡಲಾಯಿತು. -ಅಂಥೋಣಿ ಸಜಿತ್, ಬೆಂಗಳೂರಿನ ಉದ್ಯೋಗಿ