ಕಲಘಟಗಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಿದ ಸಾಕಷ್ಟು ಉದಾಹರಣೆಗಳಿವೆ. ಪ್ರಧಾನಿ ನರೇಂದ್ರ ಮೋದಿ, ಸಾಫ್ಟವೇರ್ ಕ್ಷೇತ್ರದಲ್ಲಿ ಜಗದ್ವಿಖ್ಯಾತರಾಗಿರುವ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರು ಸರ್ಕಾರಿ ಶಾಲೆಯಲ್ಲೇ ಕಲಿತವರು. ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಲು ವಿದ್ಯಾರ್ಥಿಗಳು ಅಧ್ಯಯನಶೀಲತೆ, ಪ್ರಯತ್ನಶೀಲತೆ ರೂಢಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.
ಕಲಘಟಗಿ ತಾಲೂಕಿನ ಚಳಮಟ್ಟಿಯಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲಾ ತರಗತಿ ಆರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆ ಪ್ರಾರಂಭಿಸಿದರೆ ವಿದ್ಯಾರ್ಥಿಗಳು ಬರುತ್ತಾರೋ ಇಲ್ಲವೋ ಎಂಬ ಆತಂಕವಿತ್ತು. ಆದರೆ, ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ನೋಡಿ ಆತಂಕ ದೂರವಾಗಿದೆ. ಕೋವಿಡ್ಗೆ ಭಯಪಡದೇ ಎಚ್ಚರಿಕೆ ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿ, ಜವಾಬ್ದಾರಿ ತೋರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣನವರ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ, ಜಿಲ್ಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಕಲಘಟಗಿ ಕ್ಚೇತ್ರ ಪಡೆದುಕೊಳ್ಳುತ್ತಿದೆ. ಶೈಕ್ಷಣಿಕವಾಗಿ ದಾಪುಗಾಲು ಹಾಕುವುದಷ್ಟೇ ಅಲ್ಲದೆ, ಅನೇಕ ಕ್ಷೇತ್ರಗಳಲ್ಲಿ ಜಿಲ್ಲೆ ಅಭಿವೃದ್ಧಿ ಹೊಂದಬೇಕಾಗಿದೆ. ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಮುಖ್ಯಮಂತ್ರಿಯವರು ಹಾಗೂ ಸಕ್ಕರೆ ಸಚಿವ ಮುನೇನಕೊಪ್ಪ ಅವರ ಸಹಕಾರ ಬೇಕು ಎಂದರು.
ಡಿಡಿಪಿಐ ಮೋಹನಕುಮಾರ ಹಂಚಾಟೆ, ಕಲಘಟಗಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಅಲ್ಲಾಪುರ ಇನ್ನಿತರರು ಇದ್ದರು.