ಸುಭಾಸ ಧೂಪದಹೊಂಡ ಕಾರವಾರ
ಸರ್ಕಾರಿ ಶಾಲೆ ಎಂದರೆ ಹೆಂಚಿನ ಕಟ್ಟಡ, ಬಣ್ಣ ಮಾಸಿದ ಗೋಡೆಗಳು ಎಂಬ ಭಾವನೆ ಎಲ್ಲರಲ್ಲಿದೆ. ಜನರ ಈ ಭಾವನೆಯನ್ನು ತೊಡೆದು ಹಾಕಲು ಭಾರತ ಸರ್ಕಾರ ಸ್ವಾಮ್ಯದ ಉದ್ಯಮವಾದ ಭಾರತ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಮುಂದಾಗಿದೆ.
ನಗರದ ಕುಂಠಿ ಮಹಾಮ್ಮಾಯಿ ದೇವಸ್ಥಾನ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕಟ್ಟಡವನ್ನು ತೆರವು ಮಾಡಿ, 2.5 ಕೋಟಿ ರೂ. ವೆಚ್ಚದಲ್ಲಿ ಹೊಸ ಬಿಲ್ಡಿಂಗ್ ನಿರ್ವಣಕ್ಕೆ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಮುಂದಾಗಿದೆ. ನೆಲಮಹಡಿ ಹಾಗೂ ಒಂದು ಮಹಡಿಯ ಈ ಕಟ್ಟಡದಲ್ಲಿ ಏಳು ತರಗತಿ ಕೊಠಡಿಗಳು, ಒಂದು ಪ್ರಾಂಶುಪಾಲರ ಕೊಠಡಿ, ಇನ್ನೊಂದು ಹಾಲ್, ಅಡುಗೆ ಕೋಣೆ, ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ. ಹೀಗೆ ಸಾಕಷ್ಟು ಸೌಲಭ್ಯ ಇರುವ ವ್ಯವಸ್ಥಿತ ಕಟ್ಟಡವು ಈಗ ನಿರ್ಮಾಣ ಹಂತದಲ್ಲಿದೆ. ಮಕ್ಕಳಿಗೆ ಅನುಕೂಲವಾಗುವ ವಿಶೇಷ ಪೀಠೋಪಕರಣಗಳು ಕೂಡ ಇಲ್ಲಿ ಇರಲಿವೆ ಎಂದು ಬಿಇಎಲ್ ಕಂಪನಿಯ ಡೆಪ್ಯುಟಿ ಇಂಜಿನಿಯರ್ ಭುವನೇಂದ್ರಸ್ವಾಮಿ ಕೆ.ಜಿ. ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಆಂಗ್ಲ ಮಾಧ್ಯಮಕ್ಕೆ ಪೈಪೋಟಿ: ಕುಂಠಿ ಮಹಾಮಾಯಿ ಶಾಲೆಯಲ್ಲಿ 1 ಹಾಗೂ 2ನೇ ತರಗತಿಗೆ ಆಂಗ್ಲ ಮಾಧ್ಯಮ ನಡೆಯುತ್ತಿದೆ. ಸದ್ಯ ಶಾಲೆಯ ನಿರ್ಮಾಣ ಕಾರ್ಯ ನಡೆದ ಹಿನ್ನೆಲೆಯಲ್ಲಿ ಶಾಲೆಯನ್ನು ಶಾಸಕರ ಮಾದರಿ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಶಾಲೆಯ ಭವಿಷ್ಯ ನೋಡಿ ಈಗಾಗಲೇ ಪಾಲಕರು ಮಕ್ಕಳನ್ನು ಇಲ್ಲಿಗೆ ಸೇರಿಸಲು ಪೈಪೋಟಿ ನಡೆಸುತ್ತಿದ್ದಾರೆ. ಪ್ರತಿ ತರಗತಿಗೆ 30 ಮಕ್ಕಳನ್ನು ಪಡೆಯಲು ಮಾತ್ರ ಅವಕಾಶವಿದೆ. ಈಗಾಗಲೇ ಎರಡೂ ತರಗತಿಗೆ ಒಟ್ಟು 60 ಮಕ್ಕಳು ಭರ್ತಿಯಾಗಿದ್ದಾರೆ. ಸುತ್ತಲಿನ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಯುಕೆಜಿ ಹಾಗೂ ಒಂದನೇ ತರಗತಿಯ 10ಕ್ಕೂ ಹೆಚ್ಚು ಮಕ್ಕಳು ಈ ಬಾರಿ ಈ ಶಾಲೆಗೆ ಬಂದಿದ್ದಾರೆ. ಇನ್ನೂ 25ಕ್ಕೂ ಹೆಚ್ಚು ಪಾಲಕರು ತಮ್ಮ ಮಕ್ಕಳನ್ನು ಸೇರಿಸಲು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ನಿಯಮಾವಳಿಯಂತೆ ಇದಕ್ಕೆ ಅವಕಾಶವಿಲ್ಲ ಎನ್ನುತ್ತಾರೆ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಐರಿನ್. ಒಟ್ಟಾರೆ ಶಾಲೆಯಲ್ಲಿ 90ಕ್ಕೂ ಅಧಿಕ ಮಕ್ಕಳಿದ್ದು, ಕ್ರಿಯಾಶೀಲ ಶಿಕ್ಷಕರಿದ್ದಾರೆ. ಸ್ಮಾರ್ಟ್ ಕ್ಲಾಸ್ ಸೌಲಭ್ಯವೂ ಇದೆ.
ಆಟದ ಮೈದಾನ ಬೇಕು
ಸರ್ಕಾರಿ ಶಾಲೆಯೊಂದು ಎಲ್ಲ ಆಧುನಿಕ ಸೌಲಭ್ಯ ಪಡೆದು ಖಾಸಗಿ ಶಾಲೆಗೆ ಸೆಡ್ಡು ಹೊಡೆಯಲು ಸಿದ್ಧವಾಗುತ್ತಿದೆ. ಆದರೆ, ಶಾಲೆಗೆ ಆಟದ ಮೈದಾನದ ಕೊರತೆ ಇದೆ. ಶಾಲೆಗೆ 1 ಎಕರೆ ಜಾಗ ಇದೆ ಎಂದು ಕೇಳಿದ್ದೇವೆ. ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ವಿಶೇಷ ಆಸಕ್ತಿ ತೋರಿ ಸರ್ಕಾರಿ ಶಾಲೆಗೆ ಆಟದ ಮೈದಾನವನ್ನು ಸಿದ್ಧ ಮಾಡಿಕೊಡಬೇಕು ಎಂಬುದು ವಿದ್ಯಾರ್ಥಿಗಳ ಪಾಲಕರ ಆಗ್ರಹವಾಗಿದೆ.
ಕಂಪನಿಯ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಜನವರಿಯ ಹೊತ್ತಿಗೆ ಕಟ್ಟಡವು ಉದ್ಘಾಟನೆಗೆ ಸಿದ್ಧವಾಗಲಿದೆ. ನಮ್ಮ ಕಂಪನಿ ರಾಜ್ಯಾದ್ಯಂತ ಹಲವು ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಿದೆ. | ಭುವನೇಂದ್ರ ಸ್ವಾಮಿ ಕೆ.ಜಿ., ಡೆಪ್ಯುಟಿ ಇಂಜಿನಿಯರ್ ಬಿಇಎಲ್, ಬೆಂಗಳೂರು