ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಸರ್ಕಾರಿ ಶಾಲೆಗಳ ಕುಡಿಯುವ ನೀರಿನ ಟ್ಯಾಂಕ್‌ಗೆ ಕೀಟನಾಶಕ ಬೆರೆಸಿದ ಪ್ರಕರಣ ತೀವ್ರ ಆತಂಕ ಹುಟ್ಟಿಸಿದ್ದರಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆಗೆ ಒತ್ತು ನೀಡಲು ಸರ್ಕಾರಿ ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ.
ರಾಜ್ಯಾದ್ಯಂತ 50 ಸಾವಿರ ಸರ್ಕಾರಿ, ಅನುದಾನಿತ, ಅನುದಾನರಹಿತ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ಮಕ್ಕಳ ಸುರಕ್ಷತೆ, ಶಾಲೆಗಳ ಆವರಣದಲ್ಲಿ ಅನ್ಯ ವ್ಯಕ್ತಿಗಳ ಓಡಾಟ, ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲು ಕೋಟ್ಯಂತರ ರೂ. ವೆಚ್ಚದಲ್ಲಿ ಎಲ್ಲ ಶಾಲೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಶಿಕ್ಷಣ, ಕಂದಾಯ ಇಲಾಖೆ ಜಂಟಿಯಾಗಿ ಕ್ರಿಯಾಯೋಜನೆ ರೂಪಿಸಲು ಸಿದ್ಧತೆ ಆರಂಭಿಸಿವೆ. ಅನುದಾನ ಲಭ್ಯವಾದರೆ 2025-26ನೇ ಶೈಕ್ಷಣಿಕ ಸಾಲಿನಿಂದಲೇ ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಆರಂಭಗೊಳ್ಳಲಿದೆ.
ಬೆಳಗಾವಿ, ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗೆ ಕೀಟನಾಶಕ ಬೆರೆಸಿದ ಪ್ರಕರಣ ನಡೆದ ಹಿನ್ನೆಲೆ ಬಹುತೇಕ ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಕುಡಿಯುವ ನೀರು ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲ ಪಾಲಕರು ಬಿಸಿಯೂಟ ಬಿಡಿಸಿ ಮಕ್ಕಳಿಗೆ ಮಧ್ಯಾಹ್ನ ಊಟಕ್ಕೆ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಶಾಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸರ್ಕಾರಿ, ಅನುದಾನಿತ, ಅನುದಾನರಹಿತ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುರಕ್ಷತೆ, ಕುಡಿಯುವ ನೀರಿನ ಟ್ಯಾಂಕ್, ಅಡುಗೆ ಕೋಣೆ, ಮಕ್ಕಳ ಭೋಜನಾಲಯ, ಶೌಚಗೃಹ, ಶಾಲಾ ಕೊಠಡಿ, ಆವರಣಕ್ಕೆ ಪದೇ ಪದೆ ಭೇಟಿ ನೀಡುತ್ತಿರುವ ಅನ್ಯ ವ್ಯಕ್ತಿಗಳ ಕುರಿತು ರಿಜಿಸ್ಟ್ರಾರ್ ನಿರ್ವಹಣೆ ಮಾಡಿ ತೀವ್ರ ನಿಗಾ ವಹಿಸಲು ಎಲ್ಲ ಶಾಲೆಯ ಮುಖ್ಯಾಧ್ಯಾಪಕರಿಗೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದಾಜು 50 ಕೋಟಿ ರೂ. ವೆಚ್ಚ: ಸದ್ಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಹಿರಿಯ, ಕಿರಿಯ ಪ್ರಾಥಮಿಕ ಶೇ.15 ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನುಳಿದ ಶಾಲೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಲು 50ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ನಿರ್ಣಯಿಸಬೇಕಿದೆ. ಅಲ್ಲದೆ, ಆಯಾ ಗ್ರಾಪಂ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳು ಸ್ವಂತ ಅನುದಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ದಾನಿಗಳು ಇಲ್ಲವೇ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿ ಬಳಸಲು ಅವಕಾಶವಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ ಕುರಿತು ಚರ್ಚೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಗ್ರಾಪಂ ಆಡಳಿತ ಮಂಡಳಿಗೆ ವಿನಂತಿಸಿದ್ದೇವೆ. ಕೆಲವೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಪಂ, ಎಸ್‌ಡಿಎಂಸಿ ಅವರು ಶಾಲೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಶಾಲಾ ಅವಧಿ ಮುಗಿದ ಮೇಲೆ ಸರ್ಕಾರಿ ಶಾಲೆ ಆಟದ ಮೈದಾನ, ಆವರಣದಲ್ಲಿ ಓಡಾಡದಂತೆ ಕಠಿಣ ಕ್ರಮ ಜರುಗಿಸಲಾಗಿದೆ. | ಲೀಲಾವತಿ ಹಿರೇಮಠ, ಡಿಡಿಪಿಐ, ಬೆಳಗಾವಿ ಶೈಕ್ಷಣಿಕ ಜಿಲ್ಲೆ