ಜಿಲ್ಲೆ

ಸರ್ಕಾರಿ ಶಾಲೆಗೆ ಸಿಗಲಿ ಪ್ರೋತ್ಸಾಹ, ಮಾಯಸಂದ್ರ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಜಯಕುಮಾರ್ ಆಶಯ, ವಿದ್ಯಾರ್ಥಿಗಳಿಗೆ ವಿಜಯವಾಣಿ ವಿತರಣೆ

Bengaluru Rural

ಆನೇಕಲ್: ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರ ಸಿಕ್ಕಾಗ ಖಾಸಗಿ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ ಎಂದು ಮಾಯಸಂದ್ರ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಜಯಕುಮಾರ್ ತಿಳಿಸಿದರು.

ಮಾಯಸಂದ್ರ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪುತ್ರಿ ಜಾತಸ್ಯ ಭಾರ್ಗವಿ ಹುಟ್ಟುಹಬ್ಬದ ಅಂಗವಾಗಿ ವಿಜಯವಾಣಿ ಪತ್ರಿಕೆಯನ್ನು ವರ್ಷಪೂರ್ತಿ ಉಚಿತವಾಗಿ ನೀಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿ ವೀಕ್ಷಣೆ ಹೆಚ್ಚುತ್ತಿದ್ದು, ಪತ್ರಿಕೆ ಓದುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ನಿತ್ಯದ ಆಗು-ಹೋಗು ಹಾಗೂ ವಿದ್ಯಾರ್ಥಿಗಳಿಗಾಗಿ ಇರುವ ಅಂಕಣ ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.

ಹುಟ್ಟುಹಬ್ಬವನ್ನು ಹೋಟೆಲ್‌ಗಳಲ್ಲಿ ಆಯೋಜಿಸಿ ಹಣ ವ್ಯಯ ಮಾಡುವ ಬದಲು ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಹಾಯಕ್ಕಾಗಿ ಪತ್ರಿಕೆಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ವರ್ಷದವರೆಗೆ ಪ್ರತಿದಿನ ಉಚಿತವಾಗಿ ಪತ್ರಿಕೆಗಳನ್ನು ನೀಡಲಾಗುವುದು ಎಂದರು.

ಅತ್ತಿಬೆಲೆ ಠಾಣೆ ಪೇದೆ ಕೆ.ಪಿ.ಗೋಪಾಲಕೃಷ್ಣ ಜಿ.ಕೆ. ಮಾತನಾಡಿ, ಕರೊನಾ ಸಂದರ್ಭದಲ್ಲಿ ಕೆಲವು ಗ್ರಾಮೀಣ ವಿದ್ಯಾರ್ಥಿಗಳು ಮೊಬೈಲ್ ನೆಟ್‌ವರ್ಕ್ ಸಿಗದೆ ಓದಲು ತೊಂದರೆಗೆ ಒಳಗಾಗಿದ್ದಾರೆ. ಇತ್ತೀಚೆಗೆ ವಿಜಯವಾಣಿ ಪತ್ರಿಕೆ ವಿದ್ಯಾರ್ಥಿಗಳಿಗೆ ಉತ್ತಮ ಸಲಹೆ ನೀಡುತ್ತಿದ್ದು, ಪತ್ರಿಕೆ ನೀಡುವಂತೆ ನೀಡಿದ ಸಲಹೆಯನ್ನು ಒಪ್ಪಿ ಭಾಗ್ಯಮ್ಮ ಅವರು ವಿತರಣೆಗೆ ಮುಂದಾಗಿರುವುದು ಸಮಾಜಮುಖಿ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖಂಡ ಸುರೇಂದ್ರ, ಮುಖ್ಯಶಿಕ್ಷಕ ನಾಗರಾಜು, ಶಿಕ್ಷಕರಾದ ಎ.ಜೆ.ಪಿ.ಕುಸುಮಾ, ಬಿ.ಎಂ.ರತ್ನಮ್ಮ, ಎಸ್.ಮುನಿರತ್ನಾ, ಪತ್ರಿಕಾ ವಿತರಕ ಮಲ್ಲಿಕಾರ್ಜುನ್ ಆರಾಧ್ಯ ಮತ್ತಿತರರು ಹಾಜರಿದ್ದರು.

ಗ್ರಾಮಕ್ಕೆ ಕೊಡುಗೆ ನೀಡುವ ತವಕ: ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಕೈಲಾದ ಸಹಾಯ ಮಾಡಬೇಕು. ಕೇಂದ್ರದಲ್ಲಿ ಇತ್ತೀಚೆಗೆ ಸಚಿವರಾದ ಆನೇಕಲ್ ನಾರಾಯಣಸ್ವಾಮಿ ಅವರು ಹಿಂದಿನಿಂದಲೂ ತಾಲೂಕಿಗೆ ಅಪಾರ ಕೊಡುಗೆ ನೀಡುತ್ತ ಬಂದಿದ್ದಾರೆ. ಅದೇ ರೀತಿ ನಾವೂ ಕೂಡ ಸಹಾಯ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನೆರವಿಗೆ ಮುಂದಾಗಿದ್ದೇವೆ ಎಂದು ಕಾರ್ಯಕ್ರಮ ಆಯೋಜಕ ಜಯಕುಮಾರ್ ತಿಳಿಸಿದರು.

ಮಾಯಸಂದ್ರ ಗ್ರಾಪಂ ಅಧ್ಯಕ್ಷರು, ಮಗಳ ಹುಟ್ಟುಹಬ್ಬದ ನಿಮಿತ್ತ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ಪತ್ರಿಕೆ ನೀಡಲು ಮುಂದಾಗಿರುವುದು ಉತ್ತಮ ಕೆಲಸ. ಇದೇ ರೀತಿ ಎಲ್ಲ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಹಾಯಕ್ಕೆ ಉಳ್ಳವರು ನಿಲ್ಲಬೇಕು. ಮುನಿರತ್ನಮ್ಮ ನಾರಾಯಣಪ್ಪ, ತಾಪಂ ಮಾಜಿ ಅಧ್ಯಕ್ಷೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಖಾಸಗಿ ವ್ಯಕ್ತಿಗಳ ಸಹಕಾರ ಅಗತ್ಯ. ಸರ್ಕಾರದ ಜತೆ ಎಲ್ಲರೂ ಕೈ ಜೋಡಿಸಿದಾಗ ಇನ್ನಷ್ಟು ಗುಣಮಟ್ಟ ಶಿಕ್ಷಣ ನೀಡಲು ಸಹಾಯ ಆಗುತ್ತದೆ. ಕೆ. ಚಂದ್ರಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ