ಶಹಾಬಾದ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಕೋಣೆಯೊಳಗಿನ ಅಲಮಾರಾ ಮುರಿದು ದಾಖಲೆಗಳನ್ನು ಹೊತ್ತೊಯ್ದಿರುವುದು. 
ಜಿಲ್ಲೆ

ಸರ್ಕಾರಿ ಶಾಲೆಗೆ ಕನ್ನ ಹಾಕಿದ ಖದೀಮರು

ಶಹಾಬಾದ್: ನಕಲಿ ಕೀಲಿಗಳನ್ನು ಬಳಸಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿವಿಧ ಕೋಣೆಗಳ ಬೀಗ ತೆರೆದು ತಾಂತ್ರಿಕ ಸಾಮಗ್ರಿಗಳನ್ನು ಹೊತ್ತೊಯ್ದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಶಾಸಕರ ದತ್ತು ಶಾಲೆಯಾಗಿರುವ ಈ ಶಾಲೆಯ ಆವರಣದಲ್ಲಿ ಸರ್ಕಾರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳಿವೆ. ರಾತ್ರಿ ವೇಳೆ ಶಿಕ್ಷಕರ ಕೋಣೆಯ ಬಾಗಿಲಿನ ಬೀಗ ತೆರೆದು ಅಲಮಾರಾಗಳಲ್ಲಿರುವ ಸಾಮಗ್ರಿಗಳನ್ನು ಕೆಳಗೆ ಹಾಕಿದ್ದಾರೆ. ಅಲ್ಲದೆ ಕೆಲವು ದಾಖಲೆಗಳನ್ನು ಹರಿದು ನಾಶಪಡಿಸಿ, ಕೆಲವನ್ನು ಹೊತ್ತೊಯ್ದಿದ್ದಾರೆ. ಶಾಲೆಯ ಮೊದಲ ಮಹಡಿಯಲ್ಲಿರುವ ಕೋಣೆ ಬೀಗವನ್ನು ತೆಗೆದು ಅಲ್ಲಿಯೂ ಹುಡುಕಾಡಿದ್ದಾರೆ. ಒಟ್ಟು ಎರಡು ಕೋಣೆಯಲ್ಲಿದ್ದ ಎರಡು ಸಿಪಿಯು, ಎರಡು ಮಾನಿಟರ್, ಕಂಪ್ಯೂಟರ್ ಕೀಬೋರ್ಡ್, ಒಂದು ಎಂಪ್ಲಿಫೈಯರ್, ತೂಕದ ಯಂತ್ರ ಕಳವು ಮಾಡಿದ್ದಾರೆ. ಬಳಿಕ ಎಲ್ಲ ಕೋಣೆಗಳಿಗೆ ಬೀಗ ಹಾಕಿ, ಒಂದಿಷ್ಟು ನಕಲಿ ಕೀಗಳ ಗೊಂಚಲ್ಲು ಬಿಟ್ಟು ಹೋಗಿದ್ದಾರೆ.

ಇದೇ ಶಾಲೆಯಲ್ಲಿ ಹಿಂದೆಯೂ ಎರಡು ಬಾರಿ ಕಳ್ಳತನ ನಡೆದಿತ್ತು. ಒಮ್ಮೆ ನಲಿಕಲಿ ಕೋಣೆಯ ಸಾಮಗ್ರಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ್ದು, ಆದರೆ ಪ್ರಕರಣ ದಾಖಲಿಸಿರಲಿಲ್ಲ. ಈ ಬಾರಿ ಮುಖ್ಯಗುರು ಈರಮ್ಮ ದೂರು ನೀಡಿದ್ದಾರೆ.

ಪಿಐ ನಟರಾಜ ಲಾಡೆ, ಪಿಎಸ್‌ಐ ಶಾಮರಾವ, ಪಿಸಿ ಹುಸೇನ್ ಪಾಶಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.