ಚನ್ನಗಿರಿ: ಚಂದ್ರಯಾನ ಉಡಾವಣೆಯಲ್ಲಿ ಭಾಗವಹಿಸಿ ಯಶಸ್ಸು ಕಂಡಂತಹ ವಿಜ್ಞಾನಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿತಂತವರು. ಅದ್ದರಿಂದ ಸರ್ಕರಿ ಶಾಲೆಗಳು ಎಂದು ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಸ್ವಾಮಿಗಳು ತಿಳಿಸಿದರು.
ಇಲ್ಲಿನ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಶ್ರೀ ಬಸವ ವಿದ್ಯಾಪೀಠ ಪಾಂಡೋಮಟ್ಟಿ ಅವರ ಬಸವಪ್ರಿಯ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬಸವ ಪ್ರತಿಭಾ ಪುರಸ್ಕಾರ ಹಾಗೂ ಸ್ನೇಹ ಸಿಂಚನ ಸ್ವಾಗತ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಸರ್ಕಾರ ಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸುವ ಸಲುವಾಗಿ ಸಾವಿರಾರು ಕೋಟಿ ಅನುದಾನ ನೀಡಿ ಶಾಲೆಗಳಿಗೆ ಉತ್ತಮ ಶಿಕ್ಷಕರನ್ನು ನೀಡುವ ಜತೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿದೆ. ಇತ್ತೀಚಿನ ದಿನದಲ್ಲಿ ತಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದರೆ ಮಾತ್ರ ಸರ್ಕಾರಿ ಕೆಲಸಕ್ಕೆ ಹೋಗುತ್ತಾರೆ ಇಲ್ಲದಿದ್ದರೆ ಮನೆಯಲ್ಲಿ ಇರಬೇಕಾಗುತ್ತದೆ ಎನ್ನುವಂತಹ ಮನೋಭಾವ ಪಾಲಕರಲ್ಲಿದೆ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಿಸುವಲ್ಲಿ ಹಿಂದೆ ಉಳಿದಿದ್ದಾರೆ. ಆದರೆ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇರುವಂತವರು ಸರ್ಕಾರಿ ಶಾಲೆಗಳಲ್ಲಿ ಕಲಿತವರು ಎಂಬುದನ್ನು ಮರೆಯಬಾರದು ಎಂದರು.
ಪಿಯುಸಿ ಮಕ್ಕಳ ಭವಿಷ್ಯವನ್ನು ರೂಪಿಸುವಂತಹ ಹಂತವಾಗಿದೆ. ಕಲಿಕೆಯ ಸಮಯದಲ್ಲಿ ಸಿನಿಮಾ, ಮೊಬೈಲ್, ಕ್ರಿಕೆಟ್ ಎಂದು ಅದರ ಹಿಂದೆ ಹೋಗಿ ಜೀವನ ಹಾಳು ಮಾಡಿಕೊಳ್ಳಬೇಡಿ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಓದುವ ಸಮಯದಲ್ಲಿ ಮನಸ್ಸು ನೀಡಿ ಪರಿಶ್ರಮ ಪಟ್ಟರೆ ಜೀವನವೆಲ್ಲ ಅನಂದದಿಂದ ಇರುತ್ತೀರಿ ಎಂದು ಸಲಹೆ ನೀಡಿದರು.
ತುಮ್‌ಕೋಸ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಚ್.ಎಸ್.ಶಿವಕುಮಾರ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವುದು ಅವಮಾನ ಎನ್ನುವಂತ ಕೀಳರಿಮೆ ಮನಸ್ಸಿನಿಂದ ಮೊದಲು ಹೊರಬರಬೇಕು. ನಗರ ಪ್ರದೇಶದಲ್ಲಿ ಓದಿದರೆ ಸರ್ಕಾರಿ ಹುದ್ದೆ ಸಿಗುತ್ತದೆ ಎನ್ನುವುದು ಸುಳ್ಳು. ಜೀವನ ರೂಪಿಸಿಕೊಳ್ಳಲು ಶಿಕ್ಷಣ ಕಲಿಯಬೇಕಿದೆ. ಅಬ್ದುಲ್ ಕಲಾಂ ಹೇಳಿದಂತೆ ಕನಸು ಕಣುವುದಾದರೆ ದೊಡ್ಡ ಕನಸು ಕಾಣಬೇಕು. ಅದರಂತೆ ಬೆನ್ನತ್ತಿ ಹೋದಾಗ ಸಾಧಿಸಲು ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ವಡ್ನಾಳ್ ಅಶೋಕ್, ಬುಳಸಾಗರ ಬಾಬು, ಬಸವ ವಿದ್ಯಾಪೀಠ ನಿರ್ದೇಶಕ ಟಿ.ವಿ.ಚಂದ್ರಪ್ಪ, ಬಸವ ಇಂಟರ್ ನ್ಯಾಷನಲ್ ಶಾಲೆ ಮುಖ್ಯಶಿಕ್ಷಕ ಸಿ.ಎಸ್.ನಿಜಲಿಂಗಪ್ಪ, ಕಾಲೇಜಿನ ಪ್ರಾಂಶುಪಾಲ ಸಿ.ಮದನ್ ಸಾಗರ್, ಕಾಕನೂರು ನಾಗರಾಜ್ ಇದ್ದರು.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.