ಭರತ್ ಶೆಟ್ಟಿಗಾರ್ ಮಂಗಳೂರು
ಮಹಾನಗರ ಪಾಲಿಕೆ ವ್ಯಾಪ್ತಿಯ 8 ವಾರ್ಡ್‌ಗಳ 13 ಸರ್ಕಾರಿ ಶಾಲೆಗಳು ಸ್ಮಾರ್ಟ್‌ಲುಕ್ ಹಾಗೂ ಇ-ಸ್ಮಾರ್ಟ್ ಆಗುವ ಮೂಲಕ ಮೇಲ್ದರ್ಜೆಗೇರಿವೆ. ಪ್ರಸ್ತುತ ಈ ಶಾಲೆಗಳ ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 16 ಕೋಟಿ ರೂ. ವೆಚ್ಚದಲ್ಲಿ ಈ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.
ಸ್ಮಾರ್ಟ್ ಸಿಟಿ ವತಿಯಿಂದ ನಡೆದಿರುವ ಕಾಮಗಾರಿಯ ಪ್ಯಾಕೇಜ್ 1ರಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ದುರಸ್ತಿ, ಛಾವಣಿ, ನೆಲದ ಕಾಮಗಾರಿ, ಆವರಣಗೋಡೆ ನಿರ್ಮಾಣ, ಶೌಚಗೃಹ ದುರಸ್ತಿ, ನಿರ್ಮಾಣ, ಪ್ಲಂಬಿಂಗ್ ಕೆಲಸ, ವಿದ್ಯುಚ್ಛಕ್ತಿ, ಕ್ರೀಡಾಂಗಣ ಸಹಿತ ಸೌಲಭ್ಯ ಒದಗಿಸುವುದು ಒಳಗೊಂಡಂತೆ ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲಾಗಿದೆ.
ಎರಡನೇ ಪ್ಯಾಕೇಜ್‌ನಲ್ಲಿ ಇ-ಸ್ಮಾರ್ಟ್ ಶಾಲೆಗಳನ್ನಾಗಿ ಪರಿವರ್ತಿಸುವ ಕೆಲಸ ಕೈಗೊಳ್ಳಲಾಗಿದ್ದು, 5 ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ 67.90 ಲಕ್ಷ ರೂ. ವೆಚ್ಚದಲ್ಲಿ 35 ಕಂಪ್ಯೂಟರ್ ಘಟಕ, 1.75ಲಕ್ಷ ರೂ. ವೆಚ್ಚದಲ್ಲಿ 35 ಒಳ ಸಿರಾಮಿಕ್ ಬೋರ್ಡ್, 9.8 ಲಕ್ಷ ರೂ. ವೆಚ್ಚದಲ್ಲಿ 392 ಮ್ಯಾನೇಜ್‌ಮೆಂಟ್ ಕನ್ಸೋಲ್ ಸಾಫ್ಟ್‌ವೇರ್, 97.92 ಲಕ್ಷ ರೂ. ವೆಚ್ಚದಲ್ಲಿ ನೆಟ್‌ಬುಕ್(ಲ್ಯಾಪ್‌ಟಾಪ್), 7 ಲಕ್ಷ ರೂ. ವೆಚ್ಚದಲ್ಲಿ 35 ವೈರ್‌ಲೆಸ್ ಸಾರ್ಟ್, 18 ಲಕ್ಷ ರೂ. ವೆಚ್ಚದಲ್ಲಿ ಚಾರ್ಜಿಂಗ್ ಕಾಸ್ಟ್, 83 ಲಕ್ಷ ರೂ. ಮೂಲ ಸೌಕರ್ಯ, ವಿದ್ಯುತ್ ಕೆಲಸಕ್ಕಾಗಿ ಸೇರಿ ಒಟ್ಟು 5 ಕೋಟಿ ರೂ. ವೆಚ್ಚದಲ್ಲಿ ಇ-ಸ್ಮಾರ್ಟ್ ಶಾಲೆಗಳಾಗಿ ಮೇಲ್ದರ್ಜೆಗೇರಿವೆ.
ಸೆಂಟ್ರಲ್ ಮಾರ್ಕೆಟ್ ವಾರ್ಡ್‌ನ ಸ.ಹಿ.ಪ್ರಾ.ಶಾಲೆ ಬಸ್ತಿಗಾರ್ಡನ್, ಪೋರ್ಟ್ ವಾರ್ಡ್‌ನ ಸ.ಹಿ.ಪ್ರಾ ಶಾಲೆ ನೀರೇಶ್ವಾಲ್ಯ, ಕಂಟೋನ್ಮೆಂಟ್ ವಾರ್ಡ್‌ನ ಸ.ಹಿ.ಪ್ರಾ ಶಾಲೆ ಪಾಂಡೇಶ್ವರ ಮತ್ತು ಸರ್ಕಾರಿ ಅಭ್ಯಾಸಿ ಪ್ರೌಢಶಾಲೆ ಹಂಪನಕಟ್ಟೆ, ಹೊಗೆ ಬಜಾರ್ ವಾರ್ಡ್‌ನ ಸ.ಕಿ.ಪ್ರಾ.ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಹೊಗೆ ಬಜಾರ್, ಬಂದರ್ ವಾರ್ಡ್‌ನ ಸ.ಹಿ.ಪ್ರಾ.ಶಾಲೆ(ಉರ್ದು) ಬಂದರ್ ಮತ್ತು ಸರ್ಕಾರಿ ಪ್ರೌಢಶಾಲೆ(ಉರ್ದು), ಕೋರ್ಟ್ ವಾರ್ಡ್‌ನ ಪ್ರಾಥಮಿಕ ಶಾಲೆ ಬಲ್ಮಠ ಮತ್ತು ಸೆಕೆಂಡರಿ ಶಾಲೆ ಬಲ್ಮಠ, ಬೋಳಾರ ವಾರ್ಡ್‌ನ ಸ.ಹಿ.ಪ್ರಾ.ಶಾಲೆ ಬೋಳಾರ ಮತ್ತು ಸ.ಹಿ.ಪ್ರಾ.ಶಾಲೆ(ಉರ್ದು) ಬೋಳಾರ ಪಶ್ಚಿಮ, ಕುದ್ರೋಳಿ ವಾರ್ಡ್‌ನ ಸರ್ಕಾರಿ ಮಹಿಳಾ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗ ಮೂಲಸೌಕರ್ಯದೊಂದಿಗೆ ಇ-ಸ್ಮಾರ್ಟ್ ಆಗಿ ಬದಲಾಗಿದೆ.
ಹಸ್ತಾಂತರ ಪ್ರಗತಿಯಲ್ಲಿ: ನೀರೇಶ್ವಾಲ್ಯ ಮತ್ತು ಪಾಂಡೇಶ್ವರ ಶಾಲೆಯ ಅಭಿವೃದ್ಧಿ ಕಾಮಗಾರಿ ಮುಗಿದು ಈಗಾಗಲೇ ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗಿದೆ. ಹೊಗೆಬಜಾರ್‌ನ ಎರಡು ಶಾಲೆ ಮತ್ತು ಬೋಳಾರ ವಾರ್ಡ್‌ನ ತಲಾ ಎರಡು ಶಾಲೆ ಮತ್ತು ಹಂಪಕನಟ್ಟೆಯ ಅಭ್ಯಾಸಿ ಪ್ರೌಢಶಾಲೆಗಳನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ. ರಥಬೀದಿ ಶಾಲೆ ಮತ್ತು ಬಲ್ಮಠ ಶಾಲೆಗಳು ಈ ಯೋಜನೆಯಲ್ಲಿ ಹೆಚ್ಚಿನ ಮಹತ್ವ ಪಡೆದಿದ್ದು, ಶೀಘ್ರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಉಳಿದಂತೆ ಬಸ್ತಿಗಾರ್ಡನ್ ಮತ್ತು ಬಂದರ್ ವಾರ್ಡ್ ಶಾಲೆಗಳು ಬಾಕಿ ಇವೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಅವಶ್ಯ ಮೂಲಸೌಕರ್ಯ ಕಲ್ಪಿಸಿಕೊಡುವುದು ಹಾಗೂ ಇ-ಸ್ಮಾರ್ಟ್ ಶಾಲೆಗಳಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 13 ಶಾಲೆಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು. ಪ್ರಸ್ತುತ ಎಲ್ಲ ಶಾಲೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಆಡಳಿತಕ್ಕೆ ಹಸ್ತಾಂತರಿಸುತ್ತಿರುವ ಪ್ರಕ್ರಿಯೆ ನಡೆಯುತ್ತಿದೆ.
ಅರುಣ್‌ಪ್ರಭಾ ಕೆ.ಎಸ್., ಜನರಲ್ ಮ್ಯಾನೇಜರ್, ಸ್ಮಾರ್ಟ್ ಸಿಟಿ ಲಿ