ಜಿಲ್ಲೆ

ಸರ್ಕಾರಿ ಶಾಲೆಗಳಿಗೆ ನ್ಯಾಯಾಧೀಶರ ತಂಡ ಭೇಟಿ

ಕೆ.ಆರ್.ನಗರ: ಪಟ್ಟಣದ ಹಳೇ ಸಂತೆ ಮೈದಾನದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ, ಕಸ್ತೂರಿ ಬಾ ಶಾಲೆ ಹಾಗೂ ಪಕ್ಕದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳದೆ ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದರು.

ಈ ಕುರಿತು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಲ್ಲಿ ಸೋಮವಾರ ಅಯ್ಯೋ ಪ್ರಾಬ್ಲಂ ಕಣ್ರೀ ಕಾಲಂನಲ್ಲಿ ‘ಮೈದಾನ ಆವರಿಸಿದ ಗಿಡಗಂಟಿ’ ಎಂಬ ತಲೆಬರಹದಡಿಯಲ್ಲಿ ವಿಸ್ತತ ವರದಿ ಪ್ರಕಟವಾಗಿತ್ತು. ಇದನ್ನು ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ತಕ್ಷಣವೇ ಸಮಸ್ಯೆಗೆ ಸ್ಪಂದಿಸಿದ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ.ಅರವಿಂದ, ಪ್ರಧಾನ ಸಿವಿಲ್ ನ್ಯಾಯಧೀಶ ಎಸ್.ಚಂದನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಸ್ರೀನಾ ಅವರು ಮಂಗಳವಾರ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಬಿಇಒ ಆರ್.ಕೃಷ್ಣಪ್ಪ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಆವರಣದಲ್ಲಿ ಕಾಲಿಡಲು ಸಾಧ್ಯವಾಗದಂತಹ ಮಟ್ಟಕ್ಕೆ ಗಿಡಗಂಟಿಗಳು ಬೆಳೆದು ನಿಂತಿದ್ದು ಶಾಲಾ ಶಿಕ್ಷಕರೇ ಆಗಲಿ, ಇಲಾಖೆ ಅಧಿಕಾರಿಗಳೇ ಆಗಲಿ ಸ್ಥಳವನ್ನು ಸ್ವಚ್ಛಗೊಳಿಸದೆ ನಿರ್ಲಕ್ಷೃ ವಹಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಹೇಗೆ ಕಲಿಯುತ್ತಾರೆ? ಶಾಲಾ ಆವರಣ ಹಾವು, ಚೇಳುಗಳ ವಾಸಸ್ಥಾನವಾಗಿದ್ದು, ಅವುಗಳೇನಾದರು ಕೊಠಡಿಯೊಳಗಡೆ ಬಂದು ಅನಾಹುತಗಳು ಸಂಭವಿಸಿದರೇ ಏನು ಮಾಡುವುದು ಎಂದು ಶಿಕ್ಷಕರು ಮತ್ತು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೇ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತವರಣ ಕಲ್ಪಿಸಿಕೊಡಬೇಕಾಗಿರುವುದು ಶಿಕ್ಷಣ ಇಲಾಖೆಯ ಕರ್ತವ್ಯವಾಗಿದ್ದು, ಜವಬ್ದಾರಿ ಅರಿತುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪುರಸಭೆಯವರ ಸಹಕಾರ ಪಡೆದು ಜೆಸಿಬಿ ಯಂತ್ರಗಳ ಮೂಲಕ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಕೆಲಸ ತಕ್ಷಣ ಪ್ರಾರಂಭಿಸುವಂತೆ ನಿರ್ದೇಸಿದರಲ್ಲದೇ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು, ಅರಣ್ಯ ಇಲಾಖೆ, ಎನ್‌ಜಿಒ ಸಂಘಟನೆಗಳವರ ಸಹಕಾರ ಪಡೆದು ಉತ್ತಮವಾದ ಪರಿಸರ ನಿರ್ಮಾಣ ಮಾಡುವಂತೆ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮತ್ತು ಬಿಇಒ ಆರ್.ಕೃಷ್ಣಪ್ಪ ಅವರಿಗೆ ಸೂಚಿಸಿದರು.

ಪುರಸಭಾ ಕಂದಾಯ ಅಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಎಚ್.ಎಸ್.ಲೋಕೇಶ್, ಶ್ರೀ ಕೃಷ್ಣರಾಜೇಂದ್ರ ಬಾಲಕರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ.ಚಂದ್ರಶೇಖರ್, ಉಪ ಪ್ರಾಂಶುಪಾಲ ನಾರಾಯಣ ಪ್ರಸಾದ್, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮುಖ್ಯಶಿಕ್ಷಕಿ ಸುಭದ್ರಾ ಇತರರಿದ್ದರು.