ಜಿಲ್ಲೆ

ಸರ್ಕಾರಿ ಶಾಲೆಗಳಿಗೆ ಡಿ. ಗ್ರೂಫ್ ನೇಮಕಕ್ಕೆ ಆಗ್ರಹ

ಚಿತ್ರದುರ್ಗ: ಡಿ. ಗ್ರೂಫ್ ನೌಕರರಿಲ್ಲದ ಕಾರಣ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ ಕೆಲಸದ ಹೊಣೆ ಶಿಕ್ಷಕರ ಹೆಗಲೇರಿರುವುದನ್ನು ಖಂಡಿಸಿ ಕರುನಾಡ ವಿಜಯ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಮೂಲ ಸೌಲಭ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುವಂಥ ಸ್ಥಿತಿ ತಲುಪುತ್ತಿವೆ. ಪಾಠ ಮಾಡಬೇಕೇ ಅಥವಾ ಶಾಲೆಯ ಸ್ವಚ್ಛತೆ ಕಾಪಾಡಿಕೊಳ್ಳಬೇಕೆ ಎಂಬ ಗೊಂದಲ ಶಿಕ್ಷಕರನ್ನು ಕಾಡಿದೆ. ಆದ್ದರಿಂದ ರಾಜ್ಯಸರ್ಕಾರ ಕೂಡಲೇ ಡಿ. ಗ್ರೂಫ್ ನೌಕರರನ್ನು ನೇಮಿಸಬೇಕೆಂದು ಆಗ್ರಹಿಸಿದರು.

ಅನೇಕ ಶಾಲೆಗಳಿಗೆ ರಕ್ಷಣಾಗೋಡೆ ಇಲ್ಲದೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕವುಂಟಾಗಿದೆ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದಾರೆ. ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್, ವೀಣಾಗೌರಣ್ಣ, ಗೋಪಿನಾಥ್, ಜಗದೀಶ್, ರತ್ನಮ್ಮ, ಹರೀಶ್‌ಕುಮಾರ್, ಮುಜಾಹಿದ್, ನಾಗೇಶ್, ಶಶಿಧರ, ಅಖಿಲೇಶ್, ವಿಜಯ್‌ಬಾಬು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.