ತಿಪಟೂರು: ಕನ್ನಡ ಬಡವರ ಭಾಷೆ ಎಂಬ ಪರಿಕಲ್ಪನೆಯನ್ನು ಪ್ರಭುತ್ವ ನಿವಾರಿಸದಾಗ ಮಾತ್ರ ಸರ್ಕಾರಿ ಶಾಲೆಗಳು ಮತ್ತು ಕನ್ನಡದ ಅಸ್ತಿತ್ವ ಉಳಿಯಲು ಸಾಧ್ಯ ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಹೇಳಿದರು.
ಶಿಕ್ಷಕರ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ ಧೋರಣೆ ಬಗ್ಗೆ ಸರ್ಕಾರದ ಗಮನ ಸೆಳೆೆಯುವ ನಿಟ್ಟಿನಲ್ಲಿ ಪ್ರತಿ ಕ್ಷೇತ್ರದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಬಳಿ ನಿಯೋಗ ಹೋಗುವ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯವನ್ನು ಖಾಸಗೀಕರಣಗೊಳಿಸಿದ ಪರಿಣಾಮ ಮತ್ತು ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳ ಕೊರತೆ ಮತ್ತು ಏಕೋಪಾಧ್ಯಾಯ ಶಾಲೆಗಳಲ್ಲಿನ ಶಿಕ್ಷಕರು ಎದುರಿಸುತ್ತಿರುವ ಕೆಲಸದ ಒತ್ತಡದ ಪರಿಣಾಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗುವ ಪಾಲಕರು ವಿಧಿ ಇಲ್ಲದೇ ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗಿದೆ ಎಂದರು.
2006ರಿಂದ 2015ರ ಅವಧಿಯಲ್ಲಿ ಪ್ರವೇಶಾತಿ ಕ್ಷೀಣಿಸಿದ ಕಾರಣ 11,500 ಸರ್ಕಾರಿ ಶಾಲೆಗಳು ಮುಚ್ಚಿವೆ. ಸರ್ಕಾರಿ ಶಾಲೆಗಳ ಪೈಕಿ ಪ್ರಾಥಮಿಕ ಶಾಲೆಗಳಲ್ಲಿ 50 ಸಾವಿರ ಮತ್ತು ಪ್ರೌಢಶಾಲೆಗಳಲ್ಲಿ 10 ಸಾವಿರ ಹುದ್ದೆಗಳು ಭರ್ತಿಯಾಗಿಲ್ಲ. 6 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಏಕೋಪಾಧ್ಯಾಯರಿದ್ದು ಕೇವಲ ಒಬ್ಬ ಶಿಕ್ಷಕರಿಂದ ನಿರ್ವಹಿಸಲ್ಪಡುತ್ತಿವೆ. ಏಕೋಪಾಧ್ಯಾಯ ಮಕ್ಕಳ ಹಾಜರಾತಿ, ವಿತರಿಸಿದ ಮೊಟ್ಟೆ, ತಿಂದ ಚುಕ್ಕಿ, ಬಾಳೆಹಣ್ಣು, ಬಿಸಿಯೂಟ ಬಗ್ಗೆ ವರದಿ ಮಾಡುವಷ್ಟರಲ್ಲೇ ಶಾಲಾ ಸಮಯ ಮುಗಿಯುವುದರಿಂದ ಮಕ್ಕಳಿಗಿನ್ನೆಲ್ಲಿಯ ಶಿಕ್ಷಣ ಎಂಬ ಪ್ರಶ್ನೆ ಮೂಡುತ್ತಿದೆ.
ಆಳುವ ಪ್ರಭುತ್ವದ ನೀತಿಯಿಂದ ಮತ್ತು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದರಿಂದ ಸರ್ಕಾರಿ ಶಾಲೆಗಳು ಮತ್ತು ಕನ್ನಡ ಭಾಷೆ ಬಡವರಿಗೆ ಮೀಸಲು ಎಂದು ಸಮಾಜದಲ್ಲಿ ಪರಿಗಣಿಸಲಾಗುತ್ತಿದೆ. ಎಸ್ಎಸ್ಎಲ್ಸಿ ವರೆಗೂ ಕನ್ನಡ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗೆ ಉನ್ನತ ವ್ಯಾಸಾಂಗಲ್ಲಿನ ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಾಗಿದೆ. ಇದು ತಪ್ಪಬೇಕಾದರೆ ಉನ್ನತ ವ್ಯಾಸಂಗದಲ್ಲೂ ಕನ್ನಷ ಭಾಷೆ ಕಡ್ಡಾಯ ಮಾಡಬೇಕೆಂಬ ಕುವೆಂಪು ಅವರ ಕನಸು ನನಸಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆ ಮತ್ತು ರಾಜ್ಯದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್
ಪ್ರತಿನಿಧಿಗಳ ಬಳಿ ವಿವಿಧ ಸಂಘಟನೆಗಳ ಜತೆ ನಿಯೋಗ ಹೋಗಿ, ಶಾಸನ ಸಭೆಯಲ್ಲಿ ಈ ಕುರಿತು ದನಿ ಎತ್ತುವಂತೆ ಮನವರಿಕೆ ಮಾಡಲಾಗುವುದು ಎಂದರು.