ಸಕಲೇಶಪುರ: ಪ್ರಸಕ್ತ ವರ್ಷದ ಶಿಕ್ಷಕರ ವರ್ಗಾವಣೆ ನೀತಿಯಿಂದಾಗಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ 18 ಸರ್ಕಾರಿ ಪ್ರೌಢಶಾಲೆಗಳಲ್ಲಿ 137 ಮಂಜೂರಾತಿ ಹುದ್ದೆಗಳಿವೆ. ಇದುವರೆಗೆ 104 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, 33 ಶಿಕ್ಷಕರ ಕೊರತೆ ಇತ್ತು. ಆದರೆ ಪ್ರಸಕ್ತ ವರ್ಷದ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡ 20 ದಿನಗಳಲ್ಲಿ 30 ಶಿಕ್ಷಕರು ತಾಲೂಕಿನಿಂದ ವರ್ಗಾವಣೆ ಪಡೆದಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದು, ಜುಲೈ ಅಂತ್ಯದಲ್ಲಿ ನಡೆಯುವ ವಿಭಾಗೀಯ ಮಟ್ಟದ ವರ್ಗಾವಣೆಯಲ್ಲಿ ಈ ಎಲ್ಲರೂ ವರ್ಗಾವಣೆಗೊಂಡು ಬೇರೆಡೆ ಹೋಗುವುದು ನಿಶ್ಚಿತವಾಗಿದೆ. ಪರಿಣಾಮ, ತಾಲೂಕಿನ ಪ್ರೌಢಶಾಲೆಗಳಲ್ಲಿ ಇರಬೇಕಾದ 137 ಶಿಕ್ಷಕರ ಪೈಕಿ 83 ಶಿಕ್ಷಕರ ಕೊರತೆ ಎದುರಾಗುವುದರಿಂದ ಸಾಕಷ್ಟು ಪ್ರೌಢಶಾಲೆಗಳು ಶಿಕ್ಷಕರಿಲ್ಲದ ಶಾಲೆಗಳಾಗಲಿವೆ.
ಪಾಠಪ್ರವಚನಕ್ಕೆ ತೊಡಕು: ಈಗಾಗಲೇ ಹೊಂಗಡಹಳ್ಳ ಗ್ರಾಮದ ಪ್ರೌಢಶಾಲೆಯಲ್ಲಿದ್ದ ಮೂವರು ಶಿಕ್ಷಕರು ವರ್ಗಾವಣೆಗೊಂಡಿದ್ದು, ಇಲ್ಲಿರುವ 27 ವಿದ್ಯಾರ್ಥಿಗಳಿಗೆ ಪಾಠ ಹೇಳುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಹೆತ್ತೂರು ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿದ್ದ್ದ ಏಕೈಕ ಕಾಯಂ ಶಿಕ್ಷಕ ಸಹ ವರ್ಗಾವಣೆಗೊಂಡಿದ್ದು, ಇಲ್ಲಿರುವ ಅತಿಥಿ ಶಿಕ್ಷಕರೇ ಮಕ್ಕಳಿಗೆ ಬೋಧನೆ ಮಾಡಬೇಕಿದೆ. ವನಗೂರು ಪ್ರೌಢಶಾಲೆಯಲ್ಲಿದ್ದ ಮೂವರು ಶಿಕ್ಷಕರ ಪೈಕಿ ಇಬ್ಬರು ವರ್ಗಾವಣೆಗೊಳ್ಳಲಿದ್ದರೆ, ದೇವಾಲದಕೆರೆ ಈಚಲುಬೀಡು ಪ್ರೌಢಶಾಲೆ ಸಹ ಏಕೋಪಾಧ್ಯಾಯ ಶಾಲೆಯಾಗಲಿದೆ. ತಾಲೂಕಿನ ಪ್ರೌಢಶಾಲೆಗಳು ಶಿಕ್ಷಕರಿಲ್ಲದೆ ಬರಿದಾಗುತ್ತಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಡಿಡಿಪಿಐಗೆ ವರ್ಗಾವಣೆ ತಡೆಯುವ ಅಧಿಕಾರ ಇಲ್ಲವಾಗಿದೆ.
ಪ್ರಾಥಮಿಕ ವಿಭಾಗದಲ್ಲೂ ಅಭಾವ: ಪ್ರಾಥಮಿಕ ಶಾಲೆಗಳೂ ಶೋಚನೀಯ ಪರಿಸ್ಥಿತಿಗೆ ತಲುಪಿವೆ. ತಾಲೂಕಿನಲ್ಲಿ 70 ಕಿರಿಯ ಹಾಗೂ 79 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಒಟ್ಟು 149 ಶಾಲೆಗಳಿಗೆ 445 ಶಿಕ್ಷಕರಿರಬೇಕಿತ್ತು. ಸದ್ಯ ವರ್ಗಾವಣೆ ನೀತಿಯಿಂದ 32 ಶಿಕ್ಷಕರು ವಿವಿಧ ಶಾಲೆಗಳಿಂದ ಬೇರೆ ತಾಲೂಕಿನ ಶಾಲೆಗಳಿಗೆ ವರ್ಗಾವಣೆಗೊಂಡಿದ್ದು, ಒಟ್ಟು 174 ಶಿಕ್ಷಕರ ಕೊರತೆ ಎದುರಾಗಿದೆ. ಪರಿಣಾಮ, 21 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲವಾಗಿದ್ದಾರೆ.
ಏನಿದು ಹೊಸ ನೀತಿ?: ತಾಲೂಕಿನಲ್ಲಿ ಪ್ರೌಢಶಾಲೆ ಶಿಕ್ಷಕರಾಗಲು ಅರ್ಹತೆ ಪಡೆದಿರುವವರ ಸಂಖ್ಯೆ ತೀರ ಕಡಿಮೆ. ಪರಿಣಾಮ, ಈ ಹಿಂದೆ ದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕದವರು ಹೆಚ್ಚಾಗಿ ತಾಲೂಕಿನ ಶಾಲೆಗಳಲ್ಲಿ ಶಿಕ್ಷಕರಾಗಿದ್ದರು. ಇದುವರೆಗಿನ ವರ್ಗಾವಣೆ ನೀತಿಯಂತೆ ಯಾವುದೇ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಶೇ. 25ಕ್ಕಿಂತ ಹೆಚ್ಚಿದ್ದರೆ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿತ್ತು. ಆದರೆ, ಈ ಬಾರಿ ವರ್ಗಾವಣೆ ನೀತಿಯಲ್ಲಿ ಹಿಂದಿನ ಅಂಶಕ್ಕೆ ತಿಲಾಂಜಲಿ ನೀಡಿದ್ದು, ತಾಲೂಕಿನಲ್ಲಿ 15ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದರೆ ಅಥವಾ ಒಂದು ಶಾಲೆಯಲ್ಲಿ 10 ವರ್ಷ ಮೇಲ್ಪಟ್ಟು ಕೆಲಸ ಮಾಡಿದ್ದರೆ ವರ್ಗಾವಣೆ ಪಡೆಯಬಹುದೆಂಬ ನಿಯಮ ಜಾರಿಗೊಂಡಿದೆ. ಪರಿಣಾಮ, ಹಲವು ವರ್ಷಗಳಿಂದ ವರ್ಗಾವಣೆಗಾಗಿ ಚಡಪಡಿಸುತ್ತಿದ್ದ ಶಿಕ್ಷಕರಿಗೆ ಈ ನಿಯಮ ಹಬ್ಬದೂಟ ಬಡಿಸಿದಂತಾಗಿದೆ.
ಬಸ್ ಸೌಕರ್ಯ ಇಲ್ಲ: ಮಲೆನಾಡು ಪ್ರದೇಶವಾದ ಸಕಲೇಶಪುರ ತಾಲೂಕಿನಲ್ಲಿ ಸಾಕಷ್ಟು ಶಾಲೆಗಳಿಗೆ ತಲುಪಲು ಸರಿಯಾದ ಬಸ್ ಸೌಕರ್ಯವಿಲ್ಲದ ಕಾರಣ ಹಲವು ಕಿ.ಮೀ. ನಡೆದೇ ಸಾಗಬೇಕು. ಇದಲ್ಲದೆ ಅತಿಯಾದ ಮಳೆ, ಕಾಡಾನೆ ಕಾಟದಿಂದಾಗಿ ತಾಲೂಕಿನ ಸರ್ಕಾರಿ ಶಾಲೆಗಳೆಂದರೆ ಶಿಕ್ಷಕರಿಗೆ ತಿರಸ್ಕಾರದ ಭಾವನೆ. ಅನಿವಾರ್ಯವಾಗಿ ಸೇವೆ ಸಲ್ಲಿಸುತ್ತಿದ್ದವರಿಗೆ ಈ ಬಾರಿಯ ವರ್ಗಾವಣೆ ನೀತಿ ಕಟ್ಟೆಯ ಬಾಗಿಲು ತೆರೆದಂತೆ ಮಾಡಿದೆ.
ಹೊರಗಡೆಯಿಂದ ಒಬ್ಬರೂ ಇಲ್ಲ: ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡ ನಂತರ ತಾಲೂಕಿನಿಂದ ಹೊರಹೋಗುವ ಶಿಕ್ಷಕರನ್ನು ಹೊರತುಪಡಿಸಿದರೆ, ತಾಲೂಕಿನ ಶಾಲೆಗಳಿಗೆ ಏಕೈಕ ಶಿಕ್ಷಕರೂ ಅನ್ಯ ತಾಲೂಕಿನಿಂದ ಆಗಮಿಸಿಲ್ಲದಿರುವುದು ಗಮನಾರ್ಹವಾಗಿದೆ.
ಎಲ್ಲೂ ಕೊರತೆ ಇಲ್ಲ: ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ, ಜಿಲ್ಲೆಯ ಯಾವುದೇ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. ಆದರೆ, ಸಕಲೇಶಪುರ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಶೇ. 60ರಷ್ಟು ಶಿಕ್ಷಕರ ಕೊರತೆ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ. ಇದರಿಂದಾಗಿ ಕಳೆದ ಎರಡು ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನ ಗಳಿಸಿ ಗಮನ ಸೆಳೆದಿದ್ದ ತಾಲೂಕಿನ ವಿದ್ಯಾರ್ಥಿಗಳಿಗೆ ಈ ಬಾರಿ ಪಾಠ ಹೇಳಲು ಶಿಕ್ಷಕರಿಲ್ಲದ ದುಸ್ಥಿತಿ ಎದುರಾಗಿರುವುದು ದುರಂತವೇ ಸರಿ.