ಜಿಲ್ಲೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಲಿ

ಹುಲಸೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ ಅಂಶ. ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ಗುರು ಬಸವೇಶ್ವರ ಮಠದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಬಡವರ, ರೈತರ ಮಕ್ಕಳು ಕಲಿಯುತ್ತಾರೆ. ಅವರ ಶಿಕ್ಷಣ ಸುಧಾರಣೆಗೆ ಪ್ರಾಮಾಣಿಕವಾಗಿ ಶಿಕ್ಷಕರು ದುಡಿಯಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಜತೆಗೆ ಎಲ್ಲವೂ ಎದುರಿಸುವ ಗಟ್ಟಿತನ ಬರುತ್ತದೆ. ಬಡತನ, ಹಸಿವು, ಕಷ್ಟಗಳು ಎದುರಿಸಿದವರೇ ಸಾಧಕರಾಗಲು ಸಾಧ್ಯ ಎಂದರು.
ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಅಧ್ಯಯನದ ಬಲದಿಂದಲೇ ಲೋಕ ಕಟ್ಟುವ, ಮೌಢ್ಯ, ದಾಸ್ಯಗಳಿಂದ ಬಿಡುಗಡೆ ಮಾಡುವ ಹೊಣೆಗಾರಿಕೆ ಶಿಕ್ಷಕನದು. ಶಿಕ್ಷಕ ಸಮಾಜ ವಿಜ್ಞಾನಿಯೂ, ಸಾಂಸ್ಕೃತಿಕ ಚಿಂತಕನೂ ಆಗಿದ್ದಾನೆ ಎಂದರು.
ಕನ್ನಡಕ್ಕೆ ಪಂಪನಿAದ ಕುವೆಂಪು, ಗಿರಡ್ಡಿ, ಕೆ.ವಿ.ನಾರಾಯಣ ಮೊದಲಾದವರ ವಿದ್ವತ್ ಪರಂಪರೆಯ ಅಧ್ಯಾಪಕರ ದಾರಿಯಿದೆ. ಅವರು ಕಟ್ಟಿದ ಅರಿವಿನ ಲೋಕ ಎಲ್ಲ ಕಾಲಕ್ಕೂ ಚಿಂತನೆಗಳನ್ನು ಹೊಸ ನೋಟಗಳನ್ನು ರೂಪಿಸುತ್ತದೆ. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಮಾಜ ವಿಜ್ಞಾನ, ಲಲಿತಕಲೆ, ರಂಗಭೂಮಿ ಎಲ್ಲ ಕಡೆಗಳಲ್ಲಿ ಹೊಸ ದೃಷ್ಟಿ, ಹೊಸ ನಿಲುವುಗಳಿದ್ದ ಗುರುವು ಆಪ್ತವಾಗುತ್ತಾನೆ ಎಂದರು.
ತಹಸೀಲ್ದಾರ್ ಶಿವಾನಂದ ಮೇತ್ರೆ, ಬಿಇಓ ಸಿ.ಜಿ.ಹಳ್ಳದ ಮಾತನಾಡಿದರು. ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ತಾಪಂ ಇಒ ಮಹಾದೇವ ಬಂಬಳಗೆ, ಸೂರ್ಯಕಾಂತ ಚಿಲ್ಲಾಬಟ್ಟೆ, ರಾಜಪ್ಪ ನಂದೋಡೆ, ಸೂರ್ಯಕಾಂತ ಅಡಿಕೆ, ಮಹಿಪಾಲರೆಡ್ಡಿ, ಪ್ರಭಾಕರ ಕಳಮಾಸೆ, ಸೂರ್ಯಕಾಂತ ಪಾಟೀಲ್, ಭೀಮಾಶಂಕರ ಆದೇಪ್ಪ, ಶಿವಶಂಕರ ಪತಂಗೆ, ಅಶೋಕ ರಾಜೋಳೆ, ಅಶೋಕ ರಾಯವಳೆ, ರವೀಂದ್ರ ಬಿರಾದಾರ, ಸಂತೋಷ ಅಕ್ಕಣ್ಣ, ಶರಣಬಸಪ್ಪ ಬಿರಾದಾರ, ವರ್ಷಾ ಪಂಚಾಳ, ಗದಗಯ್ಯ ಮಠಪತಿ, ಶಿವಕುಮಾರ ಸ್ವಾಮಿ ಇತರರಿದ್ದರು. ಸೂರ್ಯಕಾಂತ ಅಡಿಕೆ ಹಾಗೂ ಭೀಮಾಶಂಕರ ಆದಪ್ಪ ಸ್ವಾಗತಿಸಿದರು. ಡಿ.ಸಿ.ಪಾಟೀಲ್ ನಿರೂಪಣೆ ಮಾಡಿದರು.
ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ ಮಕ್ಕಳಿಂದ ನಾಡಗೀತೆ, ಸರ್ಕಾರಿ ಪ್ರೌಢ ಶಾಲೆ ಮಕ್ಕಳಿಂದ ಪ್ರಾರ್ಥನಾ ಗೀತೆ ಹಾಡಲಾಯಿತು.