ಹಾಸನ: ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂದು ಅಭಿಯಾನದಲ್ಲಿ ವಂದೇ ಮಾತರಂ ಸೇವಾ ಟ್ರಸ್ಟ್ ಹಾಗೂ ಯುವ ಸಂಘ ಮಾತೃಭೂಮಿ ಉಚಿತ ವೃದ್ಧಾಶ್ರಮದಿಂದ ಆಗ್ರಹಿಸಿ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಇದೆ ವೇಳೆ ಟ್ರಸ್ಟ್ ಸಂಸ್ಥಾಪಕ ನಾಗಣ್ಣ ಜೈಹಿಂದ್ ಮಾತನಾಡಿ, ದಿನೇದಿನೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಕಡಿಮೆಯಾಗುತ್ತಿದ್ದು, ಕಲಿಯುವ ಮಕ್ಕಳಿಲ್ಲದೆ ಮುಚ್ಚುತ್ತಿವೆ. ವಿದ್ಯಾಭ್ಯಾಸ ಖಾಸಗಿಕರಣಗೊಳ್ಳುತ್ತಿದೆ. ಖಾಸಗಿ ಶಾಲೆಗಳಲ್ಲಿ ದುಡ್ಡಿದವರಿಗೆ ಮಾತ್ರ ವಿದ್ಯಾಭ್ಯಾಸ ಸಿಗುತ್ತಿದೆ. ಆದ್ದರಿಂದ ಸರ್ಕಾರ ಈಗಲೇ ಎಚ್ಚೆತ್ತು ಕ್ರಮಕೈಗೊಳ್ಳದಿದ್ದಲ್ಲಿ ಶೀಘ್ರದಲ್ಲೇ ಎಲ್ಲ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತದೆ. ಶಾಲೆಗಳನ್ನು ಉಳಿಸಿ ಬಡಮಕ್ಕಳಿಗೂ ವಿದ್ಯಾಭ್ಯಾಸ ಮಾಡಲು ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ರಾಜ್ಯದ ಪ್ರತಿ ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಸೂರಿನಡಿ, ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಇಂಗ್ಲಿಷ್ ಮತ್ತ ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪ್ರಾರಂಭವಾಗಬೇಕು. ಸರ್ಕಾರದಿಂದ ಬಿಟ್ಟಿ ಭಾಗ್ಯಗಳಾದಂತಹ ಕುಟುಂಬದ ಸದಸ್ಯರಿಗೆ ಸಿಗುವಂತಹ ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ಕುಟುಂಬ ಮಹಿಳಾ ಮುಖ್ಯಸ್ಥೆಗೆ ಪ್ರತಿ ತಿಂಗಳು 2000 ರೂ. ಉಚಿತ ಪಡಿತರ ಅಕ್ಕಿ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಪದವೀದರ ನಿರುದ್ಯೋಗಿಗಳಿಗೆ ಭತ್ಯೆ. ಈ ಎಲ್ಲ ಸವಲತ್ತುಗಳನ್ನು ತೆಗೆದುಕೊಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದೆ, ಖಾಸಗಿ ಶಾಲೆಗೆ ಸೇರಿಸುವಂತಹವರ ಎಲ್ಲ ಸರ್ಕಾರಿ ಸವಲತ್ತುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪಂಚಾಯಿತಿ ವ್ಯಾಪ್ತಿಗೆ ಒಂದರಂತೆ ಇಂಗ್ಲೀಷ್ ಮತ್ತು ಕನ್ನಡ ವಸತಿ ಶಾಲೆ ಪ್ರಾರಂಭಿಸಿ, ಈ ಶಾಲೆಗಳಿಗೆ ಅತ್ಯುನ್ನತ್ತ ಪರಿಣಿತ ಶಿಕ್ಷಕರನ್ನು ನೇಮಿಸಿ ಹಾಗೂ ಮಕ್ಕಳನ್ನು ಶಾಲೆಗೆ ಕರೆತರಲು ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು. ಮೊದಲು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವಂತಾಗಲು ಸರ್ಕಾರ ಆದೇಶ ಮಾಡಬೇಕು. ಯಾರು ಸರ್ಕಾರಿ ಶಾಲೆಯಲ್ಲಿ ಓದಿಸುವುದಿಲ್ಲವೋ ಅಂತಹವರ ಮುಂಬಡ್ತಿ ಹಾಗೂ ಇಂಕ್ರಿಮೆಂಟ್ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಪಾಠ ಶಾಲೆಯಲ್ಲಿ ಕೆಲಸ ಮಾಡುವಂತಹ ಎಲ್ಲ ತರಹದ ನೌಕರರು ಶಿಸ್ತು ಬದ್ಧವಾಗಿ ಕರ್ತವ್ಯ ನಿರ್ವಹಿಸುವುದರ ಜತೆಗೆ ಶಿಕ್ಷಕ-ಶಿಕ್ಷಕಿಯರು ಮಕ್ಕಳಿಗೆ ಖಾಸಗಿ ಶಾಲೆಯಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆಯು ಮಕ್ಕಳಿಗೆ ಅತ್ಯುತ್ತಮವಾದ ಕೊಠಡಿಗಳನ್ನು ಹಾಗೂ ಶೌಚಾಲಯ ಹಾಗೂ ಮಕ್ಕಳಿಗೆ ಅಗತ್ಯವಿರುವಂತಹ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡಬೇಕು. ನಮ್ಮ ರಾಜ್ಯದಲ್ಲಿ ಪ್ರಥಮವಾಗಿ ನಮ್ಮ ಮಾತೃಭಾಷೆಗೆ ಆದ್ಯತೆ ನೀಡಬೇಕು. ಏಕೆಂದರೆ ಮಾತೃಭಾಷೆಯಲ್ಲಿ ಕಲಿಯುವಷ್ಟು ಸುಲಭವಾಗಿ ಬೇರೆ ಭಾಷೆಯಲ್ಲಿ ಕಲಿಯುವುದು ಸುಲಭವಲ್ಲ. ಹಾಗೂ ಎಲ್ಲ ತರಹದ ಜಾತಿವಾರು ವಿದ್ಯಾರ್ಥಿ ನಿಲಯಗಳನ್ನು ತೆಗೆದು ಹಾಕಿ ಸಾಮಾನ್ಯ ವಿದ್ಯಾರ್ಥಿ ನಿಲಯವಾಗಿ ಪರಿವರ್ತಿಸಿ, ಕಲಿಯುವ ಮಕ್ಕಳಲ್ಲಿ ಐಕ್ಯತೆಯ ಭಾವನೆ ಮೂಡಿಸಬೇಕು, ಜಾತಿಯತೆಯನ್ನು ತೊಲಗಿಸಬೇಕು ಎಂದು ಕೋರಿದರು.
ಇದೆ ವೇಳೆ ವಂದೇ ಮಾತರಂ ಸೇವಾ ಟ್ರಸ್ಟ್ ಕಾರ್ಯದರ್ಶಿ ವಿಕ್ರಂ ಜೈಹಿಂದ್, ಯುವ ಸಂಘದ ಪ್ರಧಾನ ಕಾರ್ಯದರ್ಶಿ ಸುಮಾ ವಿಕ್ರಂ, ರಂಗಭೂಮಿ ಕಲಾವಿದೆ ಲಕ್ಷ್ಮೀ ಇತರರು ಉಪಸ್ಥಿತರಿದ್ದರು.