ಚನ್ನರಾಯಪಟ್ಟಣ: ಸಮವಸ್ತ್ರ ಹಾಗೂ ಬಿಸಿಯೂಟ ಸೇರಿದಂತೆ ಹಲವು ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಕೆ.ಸುಧಾಕರ್ ಹೇಳಿದರು.
ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಸಿಲುಕಿರುವ ಪಾಲಕರು ಅದರಿಂದ ಮೊದಲು ಹೊರ ಬರಬೇಕಷ್ಟೆ ಎಂದರು.
ಶಿಕ್ಷಣ ಸಂಯೋಜಕ ರವೀಂದ್ರ ಮಾತನಾಡಿ, ಮಕ್ಕಳ ಮನಸ್ಸು ಹಾಗೂ ಅವರ ಆಸಕ್ತಿಯನ್ನು ಗಮನಿಸಿ ಅದಕ್ಕನುಗುಣವಾದ ವ್ಯವಸ್ಥೆ ಹಾಗೂ ವಾತಾವರಣ ಕಲ್ಪಿಸಿದರೆ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಪರೀಕ್ಷೆಯ ದಿನಗಳು ಸಮೀಪಿಸುತಿದ್ದು ಶಿಕ್ಷಕರು ಮಕ್ಕಳ ಓದಿನತ್ತ ಮತ್ತಷ್ಟು ಹೊತ್ತು ನೀಡಬೇಕು. ಇನ್ನು ಮನೆಯಲ್ಲಿ ಪಾಲಕರು ಮಾತ್ರ ಯಾವುದೇ ಕಾರಣಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಬಗ್ಗೆ ಒತ್ತಡ ನೀಡಬಾರದು. ಶಾಲೆಯಲ್ಲಿ ಸಾಕಷ್ಟು ಶಿಕ್ಷಣ ನೀಡಿ ಸಿದ್ಧರನ್ನಾಗಿ ಮಾಡಿದ್ದು ಪರೀಕ್ಷೆಯ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಪೋಷಕರಿಗೆ ಮನವಿ ಮಾಡಿದರು.
ಶಿಕ್ಷಕರಿಗೆ, ಹಿರಿಯರಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬಳಿಕ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ಧರ್ಮಪಾಲ್, ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ, ಮುಖ್ಯಶಿಕ್ಷಕಿ ಧನಲಕ್ಷ್ಮಮ್ಮ, ಸಹಶಿಕ್ಷಕ ಪುರುಷೋತ್ತಮ್ ಹಾಗೂ ಇತರರು ಇದ್ದರು.