ಜಿಲ್ಲೆ

ಸರ್ಕಾರಿ ಶಾಲೆಗಳತ್ತ ಪಾಲಕರ ಚಿತ್ತ

Haveri

ರಾಣೆಬೆನ್ನೂರ: ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ತಲೆದೋರಿದ ಆರ್ಥಿಕ ಸಂಕಷ್ಟ ಹಾಗೂ ಖಾಸಗಿ ಶಾಲೆಗಳ ದುಬಾರಿ ಶುಲ್ಕದ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದರೂ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೇ ಕಳುಹಿಸುತ್ತಿದ್ದರು. ಹೀಗಾಗಿ, ಹಲವು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಂದರ್ಭ ಬಂದಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಸರ್ಕಾರಿ ಶಾಲೆಗಳಿಗೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಹೊಟ್ಟೆಪಾಡಿಗಾಗಿ ಊರು ತೊರೆದವರು ಈಗ ಮರಳಿ ತವರು ಸೇರಿದ್ದು, ತಾವಿದ್ದಲ್ಲಿಯೇ ಬದುಕು ಕಟ್ಟಿಕೊಳ್ಳಲು ಅಣಿಯಾಗಿದ್ದಾರೆ. ಲಾಕ್​ಡೌನ್ ಕಾರಣಕ್ಕೆ ಉದ್ಯೋಗ ಕಳೆದುಕೊಂಡು ಊರು ಸೇರಿದ್ದರಿಂದ ಆರ್ಥಿಕ ಸಂಕಷ್ಟವೂ ಎದುರಾಗಿದೆ. ಜತೆಗೆ, ಆರ್ಥಿಕತೆ ಈಗಷ್ಟೇ ಚೇತರಿಕೆ ಕಾಣುತ್ತಿರುವುದರಿಂದ ಪಾಲಕರಿಗೆ ಖಾಸಗಿ ಶಾಲೆಗಳ ಶುಲ್ಕ ಹೊರೆಯಾಗಿದೆ. ಈ ಎಲ್ಲ ಕಾರಣಗಳಿಂದ ಹಳ್ಳಿಗಳ ಬಹುತೇಕ ಶಾಲೆಗಳಿಗೆ ಮಕ್ಕಳು ಬರುತ್ತಿದ್ದಾರೆ.

ಸಾವಿರಕ್ಕೂ ಅಧಿಕ ಮಕ್ಕಳಿಂದ ಪ್ರವೇಶಕ್ಕೆ ಅರ್ಜಿ: ಸದ್ಯಕ್ಕೆ ಶಾಲೆಗಳು ಇನ್ನೂ ತೆರೆಯದಿದ್ದರೂ ವಿದ್ಯಾಗಮ ಯೋಜನೆಯಡಿ ಶಿಕ್ಷಕರು ಮಕ್ಕಳಿದ್ದಲ್ಲಿಗೆ ಹೋಗಿ, ದೇಗುಲ, ಮರದ ನೆರಳು ಮುಂತಾದೆಡೆ ಪಾಠ-ಪ್ರವಚನ ಮಾಡುತ್ತಿದ್ದಾರೆ. ಪ್ರವೇಶ ಪ್ರಕ್ರಿಯೆ ತಾಲೂಕಿನಲ್ಲಿ ಆರಂಭಗೊಂಡಿದ್ದು, ಸಾವಿರಕ್ಕೂ ಅಧಿಕ ಮಕ್ಕಳು ಪ್ರವೇಶ ಬಯಸಿ ಸರ್ಕಾರಿ ಶಾಲೆಯ ಬಾಗಿಲು ತಟ್ಟಿದ್ದಾರೆ. ಖಾಸಗಿ ಮತ್ತು ಅನುದಾನಿತ ಶಾಲೆಯ ಮೇಲಿನ ವ್ಯಾಮೋಹ ಕಡಿಮೆಯಾಗಿದ್ದು, ವರ್ಗಾವಣೆ ಪ್ರಮಾಣಪತ್ರ ಪಡೆಯಲು ಪೋಷಕರು ಹರಸಾಹಸ ಪಡುತ್ತಿದ್ದಾರೆ.

ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್​ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಈ ಕಾರಣಕ್ಕೆ ಹೆಚ್ಚುವರಿ ಶುಲ್ಕವನ್ನೂ ವಸೂಲಿ ಮಾಡುತ್ತಿವೆ. ಶುಲ್ಕದ ಹೊರೆ ಹಾಗೂ ಆನ್​ಲೈನ್ ಶಿಕ್ಷಣಕ್ಕೆ ಅಗತ್ಯವಿರುವ ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್ ಹಾಗೂ ನೆಟ್​ವರ್ಕ್ ಸಮಸ್ಯೆ ಎದುರಿಸುತ್ತಿರುವ ಪೋಷಕರು ಖಾಸಗಿ ಶಾಲೆಗಳನ್ನು ತೊರೆಯುತ್ತಿದ್ದಾರೆ.

ಕಳೆದ ವರ್ಷ ತಾಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ 22,145 ಇತ್ತು. ಈ ವರ್ಷ 23,145ಕ್ಕೆ ಏರಿಕೆಯಾಗಿದೆ. ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿರುವುದು ಮಕ್ಕಳನ್ನು ಆಕರ್ಷಿಸಲು ಅನುಕೂಲವಾಗಿದೆ. ಮುಂದಿನ ದಿನದಲ್ಲಿ ಶಾಲೆಯಲ್ಲಿಯೇ ಪಾಠ ಆರಂಭವಾದರೆ, ಮಕ್ಕಳ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗಲಿದೆ ಎಂಬುದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಭಿಪ್ರಾಯವಾಗಿದೆ.

ಕರೊನಾ ಲಾಕ್​ಡೌನ್​ನಿಂದಾಗಿ ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಅವರು ಈ ಬಾರಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಆಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಮುಂದಾಗಿದ್ದಾರೆ. ಆದ್ದರಿಂದ ಪ್ರತಿ ವರ್ಷ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತ ಬಂದಿದ್ದರೆ, ಈ ವರ್ಷ ಸಾವಿರದಷ್ಟು ಏರಿಕೆಯಾಗಿದೆ. | ಎನ್. ಶ್ರೀಧರ, ಬಿಇಒ ರಾಣೆಬೆನ್ನೂರ ಬೆಂಗಳೂರಿನ ಬಟ್ಟೆ ತಯಾರಿಕೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇವು. ಆದರೆ, ಲಾಕ್​ಡೌನ್​ನಿಂದಾಗಿ ಕಂಪನಿಯವರು ಕೆಲಸದಿಂದ ತೆಗೆದರು. ಸದ್ಯ ನಮ್ಮ ಊರಲ್ಲಿಯೇ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಹೀಗಾಗಿ, ಮಕ್ಕಳನ್ನೂ ಗ್ರಾಮದ ಸರ್ಕಾರಿ ಶಾಲೆಗೆ ಸೇರಿಸಿದ್ದೇವೆ. ಅಲ್ಲದೆ, ಖಾಸಗಿಯವರು ಆನ್​ಲೈನ್ ಮೂಲಕ ಹೇಳುವ ಪಾಠಕ್ಕಿಂತ ಸರ್ಕಾರದವರು ದೇವಸ್ಥಾನ, ಗಿಡದ ನೆರಳಲ್ಲಿ ಪಾಠ ಮಾಡುತ್ತಿರುವುದು ಮಕ್ಕಳಿಗೆ ಪರಿಣಾಮಕಾರಿಯಾಗಿರುತ್ತದೆ. | ರಮೇಶ ಎಚ್., ಪಾಲಕ ಮಾಗೋಡ ಗ್ರಾಮ