ಜಿಲ್ಲೆ

ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸಮುದಾಯಗಳ ಪಾತ್ರ ಮುಖ್ಯ

ಹುಣಸೂರು: ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಮುದಾಯಗಳ ಪಾತ್ರವೂ ಬಹುಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ತಿಳಿಸಿದರು.

ಸೋಮವಾರ ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಎಲ್. ನಾಗಪ್ಪಶೆಟ್ಟಿ ಸಾವಿತ್ರಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿದ್ದ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕ ವೃಂದ ಇದೆ. ಆದರೆ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಬಡವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಈ ಎಲ್ಲ ನೂನ್ಯತೆಗಳನ್ನು ಸರ್ಕಾರಗಳು ಸರಿಪಡಿಸುವ ಕಾರ್ ನಿರಂತರವಾಗಿ ಮಾಡುತ್ತಿದ್ದರೂ ಹಲವಾರು ಅಡತಡೆಗಳು ಇದ್ದೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ದಾನಿಗಳ ನೆರವು ಬೇಕಾಗುತ್ತದೆ. ಇಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗೆ ನಾಗಪ್ಪಶೆಟ್ಟ ಸಾವಿತ್ರಮ್ಮ ಚಾರಿಟಬಲ್ ಟ್ರಸ್ಟ್ ಉದಾರವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೀಡುತ್ತಿರುವ ಕೊಡಗೆ ಅನನ್ಯವಾದುದು. ಸಮುದಾಯದತ್ತ ಶಾಲೆ ಎನ್ನುವುದು ಇದೇ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಟ್ರಸ್ಟ್ ಮುಖ್ಯಸ್ಥ ನಾಗಭೂಷಣ್ ಮಾತನಾಡಿ, ಕಳೆದ 6ವರ್ಷಗಳಿಂದ ಟ್ರಸ್ಟ್ ವತಿಯಿಂದ ಈ ಶಾಲೆಯ ಮಕ್ಕಳಿಗೆ ಉಚಿತವಾಗಿ ನಮ್ಮ ಕೈಲಾದ ಸೇವೆಯನ್ನು ಒದಗಿಸುತ್ತಿದ್ದೇವೆ. ಸರ್ಕಾರಿ ಶಾಲೆಗಳು ಮುಚ್ಚಬಾರದು. ಬಡಮಕ್ಕಳಿಗೆ ಶಿಕ್ಷಣ ದೊರೆತಲ್ಲಿ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದರು.

ಮುಖ್ಯಶಿಕ್ಷಕ ಸಿ.ಎಸ್.ಮಹೇಶ್ ಟ್ರಸ್ಟ್‌ನ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಬದ್ರಿಕುಮಾರ್, ಲಕ್ಷ್ಮೀ ಬದ್ರಿಕುಮಾರ್, ಲಕ್ಷ್ಮೀ ನಾಗಭೂಷಣ್, ಎಚ್.ಎ.ರಮೇಶ್‌ಬಾಬು, ಶರಣ್, ಸುನಾದ್ ಮತ್ತು ಸಹಶಿಕ್ಷಕರು ಹಾಜರಿದ್ದರು.