ಹಾಸನ: ದೇಶಕ್ಕೆ ಸ್ವಾತಂತ್ರೃ ಬಂದು 75 ವರ್ಷ ಕಳೆದರೂ ಸರ್ಕಾರಿ ಶಾಲೆಗಳ ಜಾಗ ಉಳಿಸಿಕೊಳ್ಳಲು ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲೇ ಕುಳಿತು ಕಟ್ಟಡಗಳಿಗೆ ಅನುಮತಿ ನೀಡುತ್ತಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೂರನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) 2ನೇ ದಿನದ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಎಷ್ಟು ಶಾಲೆಗಳ ಒತ್ತುವರಿಯಾಗಿದೆ ಎಂಬ ಮಾಹಿತಿ ಇದೆಯೇ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಡಿಡಿಪಿಐ ಜವರೇಗೌಡ ಅವರನ್ನು ಪ್ರಶ್ನಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರು ಮಾತನಾಡಿ, ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸರ್ಕಾರಿ ಶಾಲೆ ಜಾಗವನ್ನು ಕಾರ್ಮಿಕರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಇದೇ ರೀತಿಯಾದರೆ ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳೇ ಇರುವುದಿಲ್ಲ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಹೇಮಾವತಿ, ಯಗಚಿ ಜಲಾಶಯಗಳ ಮುಳುಗಡೆ ನಿರಾಶ್ರಿತರಿಗೆ (ಶೀತಪೀಡಿತ ಪ್ರದೇಶ) ನಿವೇಶನ ಹಕ್ಕುಪತ್ರ ನೀಡದೆ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. 25 ವರ್ಷ ಎಂಎಲ್‌ಎ, 10 ವರ್ಷ ಸಚಿವನಾಗಿರುವ ನನಗೆ ಯಾರ ಹಂಗೂ ಇಲ್ಲ. ನ್ಯಾಯಕ್ಕಾಗಿ ಕಂದಾಯ ಸಚಿವರ ಕಚೇರಿ ಎದುರು ಪಂಚೆ ಹಾಸಿಕೊಂಡು ಪ್ರತಿಭಟನೆ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ಅವರ ವಿರುದ್ದ ಹರಿಹಾಯ್ದರು.
ಜಿಲ್ಲೆಯ ತಟ್ಟೆಕೆರೆ, ಗಾಣಿಗರ ಹೊಸಹಳ್ಳಿ, ಕುರುಬರಹಳ್ಳಿ ಹಾಗು ದಡದಹಳ್ಳಿ ಗ್ರಾಮದ ನಿರಾಶ್ರಿತರಿಗೆ ನಿವೇಶನಗಳನ್ನು ಹಂಚಲಾಗಿದೆ. ಫಲಾನುಭವಿಗಳು ಶಕ್ತಾನುಸಾರ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಹಕ್ಕುಪತ್ರ ವಿತರಿಸಲು ಎಸ್‌ಎಲ್‌ಓ ಹಿಂದೇಟು ಹಾಕುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್‌ಎಲ್‌ಓ ಮಂಜುನಾಥ್ ಅವರು, ಮನೆಗಳನ್ನು ಕೊಡುವುದು ಎಇಗೆ ಬರುತ್ತದೆ. ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದರು. ಇದರಿಂದ ಸಿಟ್ಟಾದ ಶಾಸಕ ಎಚ್.ಡಿ.ರೇವಣ್ಣ ಅವರು, ನಿವೇಶನ ಹಕ್ಕುಪತ್ರ ನೀಡಲು ನಿಮಗೇನು ಕಷ್ಟ, ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ನನಗೆ ಯಾರ ಹಂಗೂ ಇಲ್ಲ. ಎಸ್‌ಎಲ್‌ಓ ಕಚೇರಿ ಲೂಟಿ ಕೇಂದ್ರವಾಗಿದೆ. ಎಲ್ಲಾ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಲಿ ಎಂಬ ಕಾರಣಕ್ಕೆ ವಕೀಲರನ್ನು ಕಚೇರಿಯಲ್ಲೇ ಕೂರಿಸಿಕೊಂಡಿರುತ್ತಾರೆ. ಇಂತವರಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ಗರಂ ಆದರು.
ಇದಕ್ಕೆ ಉತ್ತರಿಸಿದ ಮಂಜುನಾಥ್ ಅವರು, ಈ ವಿಚಾರವಾಗಿ ನಿಮ್ಮ ಆಪ್ತಸಹಾಯಕರಿಗೆ ದಾಖಲಾತಿ ನೀಡಲಾಗಿದೆ. ಹಕ್ಕುಪತ್ರ ವಿತರಣೆ ಕುರಿತು ಎಇಇ ಮಹೇಶ್‌ಗೆ ಕೇಳಿ ಎಂದರು.
ಆಗ ಮಹೇಶ್ ಅವರು ಮಾತನಾಡಿ, ಭೂಮಿ ಮಾತ್ರ ನಮ್ಮ ಸ್ವಾಧೀನದಲ್ಲಿ ಇರುತ್ತದೆ. ಹಕ್ಕುಪತ್ರ ಕೊಡುವ ಅಧಿಕಾರ ನಮಗಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಅಧಿಕಾರಿಗಳ ನಡುವೆ ವಾಗ್ವಾದ ನಡೆಯುತ್ತಿದ್ದಂತೆ ತಡೆದ ಎಚ್.ಡಿ.ರೇವಣ್ಣ ಅವರು, ಎಸ್‌ಎಲ್‌ಓ ಮಂಜುನಾಥ್ ಅವರಿಗೆ ಮಾಹಿತಿ ಕೊರತೆ ಇದೆ. ಕೇವಲ ಮುಳುಗಡೆ ಅಂತ ಬರುವವರಿಗೆ ಕಚೇರಿಯಲ್ಲಿ ಕುಳಿತು ಮನೆ ಕೊಡುವುದೇ ಅವರ ಕೆಲಸವಾಗಿದೆ. ನಾನು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಮಾತನಾಡಿ, ಅಗತ್ಯ ದಾಖಲಾತಿಗಳೊಂದಿಗೆ ತಮಗೆ ಮಾಹಿತಿ ನೀಡುವಂತೆ ಎಸ್‌ಎಲ್‌ಓಗೆ ಸೂಚಿಸಿದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಮಾತನಾಡಿ, ಶಾಂತಿಗ್ರಾಮದಿಂದ ಹುಳಿಯಾರು ವರೆಗೆ 900 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಸ್ಥಳೀಯ ರೈತರು ಜಮೀನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳೀಯರೊಂದಿಗೆ ಸಭೆ ನಡೆಸಿ ಅವರ ಮನವೊಲಿಸುವ ಕೆಲಸ ಮಾಡಬೇಕು. ಅಥವಾ ಈ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದಾದರೆ ಅದನ್ನಾದರೂ ಹೇಳಬೇಕು. ನಾವು ಹೇಗಾದರೂ ಕೆಲಸ ಮಾಡಿಸುತ್ತೇವೆ. ಜಿಲ್ಲಾಧಿಕಾರಿಯಾದವರು ಇಷ್ಟೂ ಕೆಲಸ ಮಾಡದಿದ್ದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.
ಕೃಷಿ ಇಲಾಖೆ ಜಂಟಿನಿರ್ದೇಶಕಿ ರಾಜುಸುಲೋಚನಾ ಅವರು ಮಾತನಾಡಿ, ಬರದಿಂದ ಜಿಲ್ಲೆಯಲ್ಲಿ 1,54,792 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಎನ್‌ಡಿಆರ್‌ಎಫ್ ಅಡಿ 131 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ತಾತ್ಕಾಲಿಕ ಬರ ಪರಿಹಾರವಾಗಿ ತಲಾ ರೈತರಿಗೆ 2 ಸಾವಿರ ರೂ. ಬಿಡುಗಡೆ ಮಾಡಿದೆ. ಜಿಲ್ಲೆಗೆ 38.75 ಕೋಟಿ ರೂ. ಬಂದಿದ್ದು, ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಅವರು ಮಾತನಾಡಿ, ಒಂದು ಹೆಕ್ಟೇರ್ ಭತ್ತ ಬಿತ್ತನೆಗೆ ರೈತ 15 ರಿಂದ 20 ಸಾವಿರ ರೂ. ಖರ್ಚು ಮಾಡುತ್ತಾನೆ. ಆದರೆ ಸರ್ಕಾರ ನೀಡುವ ಪರಿಹಾರ ಮಾತ್ರ 5 ಸಾವಿರ ರೂ. ಆಗಿರುತ್ತದೆ. ಹೀಗಾದರೆ ಅನ್ನದಾತರು ಬದುಕುವುದು ಹೇಗೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಡಿಎಫ್‌ಓ ಸೌರಭಕುಮಾರ್ ಇತರರು ಇದ್ದರು.